ಕುವೆಂಪು ಕೇವಲ ಸಾಹಿತಿ ಆಗಿರಲಿಲ್ಲ. ಅವರೊಳಗೆ ಒಬ್ಬ ಧೀಮಂತ ಸಮಾಜ ಸುಧಾರಕನಿದ್ದ. ಮದುವೆಗಳು ಆಡಂಬರದ ವಿಷಯಗಳಾಗಿದ್ದಾಗ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿದವರು ಕುವೆಂಪು. ಸಂಪ್ರದಾಯವನ್ನು ಮೀರಿದ ಮನಸ್ಸು- ಮನಸುಗಳು ಒಪ್ಪಿದ ಮದುವೆಗೆ ಅವರು ಆದ್ಯತೆ ನೀಡಿದ್ದರು. ಸರಳ ಮದುವೆಗೆ ಒಂದು ಸಂವಿಧಾನದಂತೆ ಇರುವ ’ಮಂತ್ರ ಮಾಂಗಲ್ಯ’ ಈಗಲೂ ಬದಲಾವಣೆಯ ಸಾಧನ.
ಹಲವು ಯುವಜನರು ಇಂದಿಗೂ ಮಂತ್ರ ಮಾಂಗಲ್ಯದ ಅನುಸಾರ ವಿವಾಹವಾಗುವುದನ್ನು ನೋಡಬಹುದು. ಅದು ಪುಸ್ತಕವೊಂದು ಬೀರಬಹುದಾದ ಸಾಮಾಜಿಕ ಪರಿಣಾಮಕ್ಕೆ ಅತ್ಯುತ್ತಮ ಉದಾಹರಣೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE