’ಲಿಂಗಾಯತ ಧರ್ಮದಲ್ಲಿ ಏನುಂಟು ಏನಿಲ್ಲ?’ ಎಂಬುದು ಚಿಂತಕ ರಂಜಾನ್ ದರ್ಗಾ ಅವರ ಕೃತಿ. ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಅವರು ಲಿಂಗಾಯತ ಧರ್ಮದ ಒಳಗಿನ ತತ್ವ ಸಾರ, ಹಿಂದೂ ಧರ್ಮಕ್ಕಿಂತ ಅದು ಹೇಗೆ ಭಿನ್ನ, ಲಿಂಗಾಯತ ಮತ್ತು ವೀರಶೈವ ಧರ್ಮಕ್ಕಿರುವ ವ್ಯತ್ಯಾಸ, ಶರಣರು ಹೇಗೆ ಚಳವಳಿಯೊಂದನ್ನು ಧರ್ಮದ ರೂಪದಲ್ಲಿ ಬೆಳೆಸಿದರು ಎಂಬುದನ್ನು ಚರ್ಚಿಸಿದ್ದಾರೆ. ಅಂತೆಯೇ ವೀರಶೈವ ಧರ್ಮ ಹುಟ್ಟಿದ್ದು ಪಂಚಾಚಾರ್ಯರು ಮತ್ತು ಸಿದ್ಧಾಂತ ಶಿಖಾಮಣಿ ವೀರಶೈವರ ಧರ್ಮಗ್ರಂಥ ಎಂದು ಪ್ರತಿಪಾದಿಸುತ್ತಾರೆ.
ಆದರೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದು ಬಸವಣ್ಣ ಎಂಬುದು ಲೇಖಕರ ಅಭಿಪ್ರಾಯ. 770 ಗಣಗಳು ಲಿಂಗಾಯತ ಧರ್ಮದ ನಾಯಕರು. ವಚನಗಳೇ ಲಿಂಗಾಯತ ಧರ್ಮಗ್ರಂಥ. ಅನುಭಾವವೇ ಲಿಂಗಾಯತ ದರ್ಶನ. ಲಿಂಗಾಂಗ ಸಾಮರಸ್ಯವೇ ಲಿಂಗಾಯತರ ಜೀವನ್ಮುಕ್ತಿ ಎಂದು ಕೃತಿ ಒತ್ತಿ ಹೇಳುತ್ತದೆ. ವೀರಶೈವ ಧರ್ಮ ಕಾಲ್ಪನಿಕ ಅಂದರೆ ಪುರಾಣ ಇತಿಹಾಸಗಳ ನಡುವಿನ ಗೊಂದಲಗಳಲ್ಲಿ ದಾರಿಕಾಣದೆ ಒದ್ದಾಡುತ್ತದೆಯಾದರೆ, ಲಿಂಗಾಯತ ಧರ್ಮದ ಹಾದಿ ಸ್ಪಷ್ಟವಿದೆ. ಅದು ಇತಿಹಾಸದೊಂದಿಗೆ ಸ್ಪಷ್ಟ ಸಂಬಂಧವನ್ನು ಹೊಂದಿದೆ. ಪುರಾಣಗಳನ್ನು, ಕಾಲ್ಪನಿಕ ಕತೆ ಕಂತೆಗಳನ್ನು ನಿರಾಕರಿಸುವ ಮೂಲಕವೇ ಲಿಂಗಾಯತ ಧರ್ಮ ಹುಟ್ಟಿದೆ. ಆದುದರಿಂದ ವೀರಶೈವಕ್ಕೂ ಲಿಂಗಾಯತಕ್ಕೂ ಇರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ ಎನ್ನುವುದನ್ನು ಹೇಳಲಾಗಿದೆ. ಅದಕ್ಕೆ ಪೂರಕವಾದ ಉದಾಹರಣೆಗಳನ್ನೂ ನೀಡಲಾಗಿದೆ.
ಹನ್ನೆರಡನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಹಾಳುಗೆಡವಿದ ಪಟ್ಟಭದ್ರ ಹಿತಾಸಕ್ತಿಗಳು ಈಗ ಬೇರೆ ಬೇರೆ ರೂಪದಲ್ಲಿ ಆ ಧರ್ಮವನ್ನು ಕಾಡುತ್ತಿವೆ ಎಂಬ ವಿಶ್ಲೇಷಣೆ ಕೃತಿಯಲ್ಲಿದೆ. ಲಿಂಗಾಯತರು ತಮ್ಮದೇ ಸ್ವತಂತ್ರ ಧರ್ಮದ ಬೇಡಿಕೆಯನ್ನು ಮುಂದಿಡುವ ವರ್ತಮಾನದ ಅಗತ್ಯವನ್ನೂ ಪುಸ್ತಕ ಚರ್ಚಿಸುತ್ತದೆ.
©2024 Book Brahma Private Limited.