'ಕಪ್ಪುಬುರ್ಖಾ ಮತ್ತು ಕೇಸರಿ ಶಾಲು' ಲೇಖಕ ರಾಜೇಂದ್ರ ಬುರಡಿಕಟ್ಟಿ ಅವರ ಲೇಖನ ಸಂಕಲನ. ಕೃತಿಯಲ್ಲಿ ಮೂವತ್ತು ಲೇಖನಗಳಿವೆ. ಎಲ್ಲವೂ ವೈಚಾರಿಕ ಚಿಂತನೆಯ ಮೇಲೆ ಒತ್ತು ಹಾಕಿದ ಲೇಖನಗಳು. ವರ್ತಮಾನದ ಘಟನೆಗಳಿಗೆ ಸಂಬಂಧಿಸಿ ಸಮಯೋಚಿತವಾಗಿ ಸರಿ-ತಪ್ಪುಗಳ ಬಗ್ಗೆ ಸಮತೋಲನವನ್ನು ಕಾಪಾಡಿಕೊಂಡು, ವಿವೇಚನಾ ಪೂರ್ವಕವಾಗಿ ಮಂಡಿಸಿದಂತಹ ವಿಚಾರಗಳು ಇಲ್ಲಿವೆ. ಏಳೆಂಟು ಲೇಖನಗಳಷ್ಟೇ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದವು ಒಂದೆರಡು ಪುಟಗಳ ಪುಟ್ಟ ಬರಹಗಳು. ಮುಖ್ಯವಾಗಿ ಇಲ್ಲಿನ ಹಲವು ಲೇಖನಗಳಲ್ಲಿ ತಮ್ಮ ಧರ್ಮದ ಸಿದ್ಧಾಂತಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಹಿಂಸೆ-ದೊಂಬಿಗಿಳಿದು ಸಾಮಾಜಿಕ ಶಾಂತಿಯನ್ನು ಹಾಳುಗೆಡಹುವ ಹಿಂದೂಗಳಾಗಲಿ, ಮುಸ್ಲಿಮರಾಗಲಿ, ಕ್ರೈಸ್ತರಾಗಲಿ- ಎಲ್ಲರ ಅಜ್ಞಾನದ ಬಗ್ಗೆ ಲೇಖಕರು ತಮ್ಮ ನೋವನ್ನು ವ್ಯಕ್ತಪಡಿಸುತ್ತಾರೆ. ಇನ್ನೊಬ್ಬರ ಧಾರ್ಮಿಕ ನಂಬಿಕೆಗಳನ್ನು ಹೀಗಳೆದು ಗೇಲಿ ಮಾಡುವುದು ಯಾವ ಧರ್ಮದ ಲಕ್ಷಣವೂ ಅಲ್ಲವೆನ್ನುತ್ತಾರೆ. ನಮ್ಮ ಧರ್ಮವೇ ಸರ್ವಶ್ರೇಷ್ಠ, ಅದು ಪ್ರಪಂಚದ ಎಲ್ಲರೂ ಅನುಸರಿಸುವ ಧರ್ಮವಾಗಬೇಕೆಂದು ಹೇಳುತ್ತಾ ಅದಕ್ಕಾಗಿ ಹಿಂಸಾಮಾರ್ಗಕ್ಕಿಳಿಯುವುದು ಅಮಾನುಷ ಅನ್ನುತ್ತಾರೆ. ನಮ್ಮದೇ ಸರಿಯೆಂದು ವಾದಿಸುವವರು ಸ್ವಲ್ಪ ತಾಳ್ಮೆ ವಹಿಸಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ ಕೊಡುತ್ತಾರೆ. ಎಲ್ಲ ಧರ್ಮಗಳ ಅನುಯಾಯಿಗಳಲ್ಲೂ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡವರಿಂದಾಗಿ ಒಳ್ಳೆಯ ಮನಸ್ಸಿನ ಮುಗ್ಧರು ತೊಂದರೆ ಅನುಭವಿಸುವಂತಾಗುತ್ತದೆ ಅನ್ನುತ್ತಾರೆ. ಈ ರೀತಿ ಮಾತನಾಡುವುದಕ್ಕೆ ಪೂರ್ವಭಾವಿಯಾಗಿ ಲೇಖಕರು ಎಲ್ಲ ಪ್ರಮುಖ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿ ನಿಷ್ಪಕ್ಷವಾಗಿ ಅಲ್ಲಿಂದ ಸಂಬಂಧಪಟ್ಟ ಸಾಲುಗಳನ್ನು ಉದಾಹರಿಸುತ್ತಾರೆ. ಇದು ಅವರ ಸೂಕ್ಷ್ಮ ವಿವೇಚನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
©2024 Book Brahma Private Limited.