ಕಂಡದ್ದು ಕಂಡಹಾಗೆ

Author : ಪಿ. ಲಂಕೇಶ್

Pages 136

₹ 90.00




Year of Publication: 2011
Published by: ಲಂಕೇಶ್ ಪ್ರಕಾಶನ
Address: ಬಸವನಗುಡಿ, ಬೆಂಗಳೂರು-560004
Phone: 26676427

Synopsys

‘ಕಂಡದ್ದು ಕಂಡಹಾಗೆ’ ಕವಿ, ಲೇಖಕ, ಕಲಾವಿದ, ಪತ್ರಕರ್ತ ಪಿ.ಲಂಕೇಶ್ ಅವರ ಲೇಖನ ಸಂಕಲನ. ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರಭಾವಿಸಿದ ಬಹುಮುಖ ಪ್ರತಿಭೆ ಪಿ. ಲಂಕೇಶ್ ತನ್ನ ಸುತ್ತಲಿನ ಸಮಾಜದ ಪ್ರತಿಯೊಂದನ್ನೂ ತಮ್ಮದೇ ವಿಶೇಷ ದೃಷ್ಟಿಕೋನದಲ್ಲಿ ಗ್ರಹಹಿಸುತ್ತಿದ್ದ ವ್ಯಕ್ತಿ, ಆ ಗ್ರಹಿಕೆಗಳಿಗೆ ವಿಭಿನ್ನ ರೂಪ ನೀಡುತಿದ್ದ ಲೇಖಕ. ಈ ಕೃತಿಗೆ ಬೆನ್ನುಡಿ ಬರೆಯುತ್ತಾ ಲಂಕೇಶ್ ಮತ್ತೊಂದು ವಿಚಾರವನ್ನು ಓದುಗರ ಮುಂದಿಡುತ್ತಾರೆ. ‘ಸಾಹಿತ್ಯವನ್ನು ಸೃಷ್ಟಿಸುವುದು ಮಹಾ ಏಕಾಂಗಿತನದ ಕರ್ಮ; ಸೃಷ್ಟಿಸುವವನಲ್ಲಿ ಅಸಹಾಯಕತೆ ಮತ್ತು ಭಯವನ್ನು ಹುಟ್ಟಿಸುವ, ಅಭ್ಯಾಸದಿಂದ ಬಂದ ಯಾವ ಸಾಮಾಜಿಕ ನಿಲುವುಗಳೂ ಆತನಿಗೆ ನೆರವಾಗದೆ ಇರುವ ಸ್ಥಿತಿ; ಎಲ್ಲ ಕ್ಲೀಷೆಗಳನ್ನೂ, ಸ್ವೀಕೃತ ಸಾಮಾಜಿಕ, ನಿಲುವುಗಳನ್ನೂ ತಿರಸ್ಕರಿಸಿ ಜೀವನವನ್ನು ಗ್ರಹಿಸುವ ಕೆಲಸ.

ಇಂಥ ಸಾಹಿತ್ಯ ಸೃಷ್ಟಿಯಾದಾಗಲೆಲ್ಲ ಅದರ ಅರ್ಥಪೂರ್ಣತೆಯನ್ನು ಗ್ರಹಿಸುವ, ಮಿಕ್ಕ ಸಾಹಿತ್ಯಪ್ರಿಯರೊಂದಿಗೆ ಹಂಚಿಕೊಳ್ಳುವ ಕೆಲಸ ಮಾಡುವವನೇ ವಿಮರ್ಶಕ. ಈತನನ್ನು ಕೆಟ್ಟ ಕವಿಗಳು ರಸಿಕ, ಸಹೃದಯಿ, ಗೆಳೆಯ ಇತ್ಯಾದಿಯಾಗಿ ಹೊಗಳಿ ಇವನಿಂದ ಒಳ್ಳೆಯ ಅಭಿಪ್ರಾಯ ಪಡೆಯಲು ಯತ್ನಿಸುವುದುಂಟು. ಆದರೆ ಸಾಹಿತ್ಯಕೃತಿಗಳನ್ನು ಸೃಷ್ಟಿಸುತ್ತಿರುವಾಗ ಅವರೆಲ್ಲರ ಕ್ರಿಯೆಯ ಬಗ್ಗೆ ಸಹಾನುಭೂತಿಯನ್ನು ಇಟ್ಟುಕೊಂಡೂ ನ್ಯಾಯವಂತನಾಗಿ ಇರಬಲ್ಲವನು, ಭಾವುಕನಾಗಿ ಕವಿಯ ಜಗತ್ತನ್ನು ಪ್ರವೇಶಿಸಿದರೂ ವೈಚಾರಿಕತೆ ಮತ್ತು ಮಾನದಂಡವನ್ನು ಬಳಸಿ ಕವಿಯ ಕೃತಿಯನ್ನು ನೋಡಬಲ್ಲವನು ವಿಮರ್ಶಕ, ಅಂದರೆ, ಕೃತಿಯ ಬಗ್ಗೆ ಉತ್ತೇಕ್ಷೆ, ಸುಳ್ಳು, ಅನಗತ್ಯ ಹೊಗಳಿಕೆ, ಅವೈಚಾರಿಕ ಖಂಡನೆ ಮುಂತಾದ್ದರಿಂದ ದೂರವಿದ್ದು ಕೃತಿಗೆ ತನ್ನನ್ನುತಾನು ಕೊಟ್ಟಕೊಂಡೂ ನಿಷ್ಠುರವಾಗಿರಬಲ್ಲವನು ವಿಮರ್ಶಕ’ ಎನ್ನುತ್ತಾರೆ. ಈ ಕೃತಿಯಲ್ಲಿ ಹಲವು ಕ್ಷೇತ್ರಗಳ ವ್ಯಕ್ತಿಗಳ ಬಗ್ಗೆ ವಿಚಾರಗಳ ಬಗ್ಗೆ ಲಂಕೇಶರು ನೀಡಿರುವ ಒಳನೋಟದ ಲೇಖನಗಳಿವೆ. 

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Reviews

ಹೊಸತು-2004- ಡಿಸೆಂಬರ್‌

ಒಬ್ಬ ಪತ್ರಕರ್ತ, ನಾಟಕಕಾರ ಮತ್ತು ನಿರ್ಭಿಡೆಯ ಬರಹಗಾರರೂ ಆಗಿದ್ದ ಮಾನ್ಯ ಪಿ. ಲಂಕೇಶ್ ಕನ್ನಡಿಗ ರೆಲ್ಲರಿಗೂ ಪರಿಚಯವಿರುವ ವ್ಯಕ್ತಿ ಸಾಮಾಜಿಕವಾಗಿ ಸಾಹಿತ್ಯಕವಾಗಿ ಅವರು ಅಪೇಕ್ಷಿಸಿದ್ದ ನಿಲುವುಗಳು ಹಾಗೂ ಕಂಡದ್ದು ಕಂಡಹಾಗೆ ಪ್ರತಿಪಾದಿಸಿದ ಗಟ್ಟಿ ವಿಚಾರಗಳು ಸಾಮಾನ್ಯರಿಗೆ ಅರ್ಥವಾಗದೇ ಹೋದದ್ದೊಂದು ದುರಂತವೆನ್ನಬಹುದು. ದಿಟ್ಟತನ ಅವರ ಆಸ್ತಿ ಆಗಿರುವಂತೆಯೇ ಅನೇಕ ವಿರೋಧಿ ಗಳನ್ನೂ ಅದು ಸೃಷ್ಟಿಸಿಕೊಟ್ಟಿತು. ಹಾಗಾಗಿ ನಮ್ಮಲ್ಲಿ ಗಾದೆಯೇ ಇರುವಂತೆ ಕಂಡದ್ದು ಕಂಡಂತೆ ಬರೆದಾಗ ಸಂಬಂಧಿಸಿದವರಿಗೆ ಕೆಂಡದಂಥ ಕೋಪ ಬಂದಿದ್ದೂ ಅಷ್ಟೇ ಸಹಜವಾಗಿತ್ತು. ಅವರ ಲೇಖನಗಳು ಟೀಕೆ ಮತ್ತು ಟಿಪ್ಪಣಿಗಳಾಗಿದ್ದವು. ಇಲ್ಲಿ ಅಂತಹ ವಿವಿಧ ಸಂದರ್ಭಗಳಲ್ಲಿನ ಲೇಖನಗಳು, ಮುನ್ನುಡಿಗಳು, ಭಾಷಣಗಳನ್ನೊಳಗೊಂಡ ಲಂಕೇಶ್ ಅಭಿಪ್ರಾಯಗಳನ್ನು ಕಲೆಹಾಕಲಾಗಿದೆ.

Related Books