ವೈಚಾರಿಕ ಬರಹಗಳ ಈ ಸಂಗ್ರಹ ಒಮ್ಮೆ ಹಿಡಿದು ಕುಳಿತು ಓದಿ ಮುಗಿಸುವಂಥದ್ದಲ್ಲ. ಇಲ್ಲಿಯ ಲೇಖನಗಳು ಮರುಓದಿನೊಂದಿಗೆ ಮರುಚಿಂತನೆಗೆ ಒಳಪಡಿಸುವಂತವುಗಳು. ಕನ್ನಡ ಅಧ್ಯಾಪಕಿಯಾಗಿರುವ ಸುಮಾವೀಣಾರು ವಿದ್ಯಾರ್ಥಿಗಳೆದುರು ಒಬ್ಬ ಲೇಖಕನನ್ನು ತಂದು ನಿಲ್ಲಿಸುವಾಗ, ಕೃತಿಯೊಳಗೆ ಮಾಡುವ ಪರಕಾಯ ಪ್ರವೇಶ ಮೂಡಿಸುವ ಭಾವಸ್ತರ ಪ್ರತಿ ಓದಿಗೂ ಭಿನ್ನವಾಗಿರುತ್ತದೆ. ಮತ್ತಷ್ಟು-ಇನ್ನಷ್ಟು ಆಳಕ್ಕೆ ಇಳಿಯುವಂತೆ ಮಾಡುತ್ತದೆ. ಇಲ್ಲಿರುವ ಲೇಖನಗಳು ಮಹಿಳಾಪರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದು, ಪೌರಾಣಿಕ-ಜಾನಪದೀಯ ಪಾತ್ರಗಳು ಕೇವಲ ಪ್ರಸ್ತುತೀಕರಣವಾಗಿ ಬಂದಿಲ್ಲ, ಬದಲಾಗಿ ಇಂದಿನ ಮಹಿಳೆಯರ ಬದುಕಿನೊಂದಿಗೆ ತೌಲನಿಕವಾಗಿ ಮೂಡಿಬಂದಿದ್ದು, ಒಂದು ಆರೋಗ್ಯಪೂರ್ಣ ಸಮಾಜದ ಅನಿವಾರ್ಯತೆಯನ್ನು ಸಾಬೀತುಪಡಿಸುವಂತವುಗಳು. ಇಲ್ಲಿಯ ಬರಹಗಳು ಸ್ತ್ರೀ ವಾದದ ಅತಿಯನ್ನು ಎಲ್ಲಿಯೂ ಬಿಂಬಿಸುವಂತವುಗಳಲ್ಲ, ಅಂತೆಯೆ ಪುರುಷ ವಿರೋಧಿಯಾದ ಮಾತುಗಳನ್ನು ಹೇಳುವಂಥದ್ದೂ ಅಲ್ಲ. ‘ನಡುವೆ ಸುಳಿವಾತ್ಮ’ ಒಂದೇ ಎಂಬ ಅಂತರ್‌ಧಾರೆಯನ್ನು ಒಡಲಲ್ಲಿ ತುಂಬಿಕೊಂಡಿರುವಂತವುಗಳು. ಅಧ್ಯಾಪಕರು ನಿರಂತರ ಅಧ್ಯಯನಶೀಲರಾದಾಗ ಮಾತ್ರ ಓದಿನಲ್ಲಿ ಹೊಸ-ಹೊಸ ಹೊಳಹುಗಳು ಕಾಣಸಿಗುತ್ತವೆ, ಎಂಬುದಕ್ಕೆ ಈ ಕೃತಿ ಉತ್ತಮ ಉದಾಹರಣೆಯಾಗಿದೆ ಜೊತೆಗೆ ಅಧ್ಯಾಪನ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಕಿವಿ ಮಾತುಗಳನ್ನೂ ಹೇಳುತ್ತದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಮಾಧವಿ ಎಸ್. ಭಂಡಾರಿ ತಿಳಿಸಿದ್ದಾರೆ.
©2024 Book Brahma Private Limited.