ಹಿಂದ್ ಸ್ವರಾಜ್

Author : ಡಿ.ಎಸ್.ನಾಗಭೂಷಣ

Pages 199

₹ 100.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560183
Phone: 207 - 23183311, 23183312

Synopsys

ಗಾಂಧಿ ಕನಸಿನ ಭಾರತ ಕುರಿತು ತಿಳಿದುಕೊಳ್ಳಲು ಈ ಕೃತಿಯು ಸಹಕಾರಿಯಾಗಲಿದೆ. ಭಾರತೀಯರು ಸ್ವಾಭಿಮಾನ, ಸೌಹಾರ್ದತೆಯಿಂದ ಹೇಗೆ ಜೀವನ ನಡೆಸಬೇಕು ಎಂಬುದನ್ನು ವಿವರಿಸಿದ್ದರು. ಗಾಂಧಿ ಬರೆದ ಹಿಂದ್ ಸ್ವರಾಜ್ ಕೃತಿ ಹಾಗೂ ಗಾಂಧಿಯವರ ಸಿದ್ಧಾಂತವನ್ನು ಅಧ್ಯಯನ ನಡೆಸಿರುವ ಡಿ.ಎಸ್. ನಾಗಭೂಷಣ ಅವರು ಹಿಂದ್ ಸ್ವರಾಜ್ ಕೃತಿಯನ್ನು ಸಂಪಾಧಿಸಿದ್ದಾರೆ. ಇದರಲ್ಲಿ ಗಾಂಧಿ ತತ್ವ ಆದರ್ಶಗಳು ಏನಾಗಿದ್ದವು ಎಂಬುದನ್ನು ಹೊಸದಾಗಿ ಗಾಂಧಿ ಬಗ್ಗೆ ಓದುವ ಬಯಕೆ ಇರುವವರಿಗೆ ಪ್ರವೇಶಿಕೆ ರೂಪದಲ್ಲಿ ಪ್ರಕಟಿಸಲಾಗಿದೆ. 

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Reviews

ಗಾಂಧಿಯೊಂದಿಗೆ ಮತ್ತೊಮ್ಮೆ ಅನುಸಂಧಾನಕ್ಕೆ ಪ್ರೇರಣೆ

ಮಹಾತ್ಮಾ ಗಾಂಧಿಯವರ 'ಹಿಂದ್ ಸ್ವರಾಜ್' ಗೆ ಒಂದು ಸ್ವಾಗತಾರ್ಹ ಪ್ರವೇಶಿಕೆಯನ್ನು ಡಿ.ಎಸ್ ನಾಗಭೂಷಣ ತಯಾರಿಸಿದ್ದಾರೆ. ಹಿಂದ್ ಸ್ವರಾಜ್ ಮೂಡಿ ಬಂದ ಹಿನ್ನೆಲೆ, ಅದರ ಸಂದರ್ಭ ಮತ್ತು ಅದರ ಮೂಲ ತಾತ್ವಿಕ ನಿಲುವಿನ ಬಗ್ಗೆ ಒಂದು ಉಪಯುಕ್ತ ಪ್ರಬಂಧವನ್ನು ಸಂಪಾದಕರು ಮಂಡಿಸಿದ್ದಾರೆ. ಜೊತೆಗೆ ಅನುಬಂಧಗಳಲ್ಲಿ ಇನ್ನೊಂದಿಷ್ಟು ಪೂರಕ ಬರಹಗಳಿವೆ. ಇವೆಲ್ಲವೂ ಹಿಂದ್ ಸ್ವರಾಜ್ ಪುಸ್ತಕದ ಓದು-ಮರುಓದಿಗೆ ಬಹಳ ಉಪಯುಕ್ತವಾಗುತ್ತವೆ.

ಹಿಂದ್ ಸ್ವರಾಜ್ ಮರು ಓದಿಗಲ್ಲದೇ ಮರುವಿಮರ್ಶೆಗೂ ಕಾಲಕಾಲಕ್ಕೆ ಒಳಗಾಗಬೇಕು. ಗಾಂಧಿಯವರು ಬದುಕಿದ್ದಾಗಲೇ ಅದರ ಪ್ರಸ್ತುತೆಯ ಬಗ್ಗೆ ಪ್ರಶ್ನೆಗಳಿದ್ದುವು. ಇದನ್ನು ಅವಸರದಲ್ಲಿ ಬರೆದದ್ದರಿಂದ ಅದರಲ್ಲಿರುವ ವಿಚಾರಗಳು ಅತಿಯಾದ ವಾದಸರಣಿ ಎಂಬ ಟೀಕೆಯನ್ನು ಆಗಲೇ ಗಾಂಧಿಯವರು ಎದುರಿಸಿದ್ದರು. ಭಾರತಕ್ಕೆ ಬಂದು ಭಾರತವನ್ನು ಸುತ್ತಾಡುವ ಮೊದಲೇ ಬರೆದಿದ್ದ ಇಲ್ಲಿನ ವಿಚಾರಗಳನ್ನು ವರ್ಷಗಳ ನಂತರವೂ ಗಾಂಧಿಯವರು ಸಮರ್ಥಿಸಿಕೊಳ್ಳುತ್ತಿದ್ದರು, ಇತರರಿಗೆ ನೆನಪು ಮಾಡಿಕೊಡುತ್ತಿದ್ದರು ಎಂದಾದರೆ ಈ ವಿಚಾರಗಳ ಬಗ್ಗೆ ಗಾಂಧಿಯವರಿಗೆ ಇದ್ದ ಪ್ರಬಲವಾದ ನಂಬಿಕೆ ಮತ್ತು ಅದರ ತಾತ್ತಿಕ ಚೌಕಟ್ಟಿನ ಬಲ ನಮಗೆ ವೇದ್ಯವಾಗುತ್ತದೆ. ಅಲ್ಲಿ ಮಂಡಿಸಿರುವ ವಾದಗಳು ಕಾಲ ಸಂದರ್ಭಗಳನ್ನು ಮೀರಿ ಇನ್ನೂ ಪ್ರಸ್ತುತವಾಗಿ ನಿಂತಿವೆಯೆಂದರೆ ಆ ನಿಲುವುಗಳು ಸರ್ವಕಾಲಿಕ ತತ್ವಗಳೇ ಆಗಿರಬೇಕು. ಹೀಗಾಗಿಯೇ ಈ ಪುಸ್ತಕದ ಚರ್ಚೆಯನ್ನು ನಾವು ಮತ್ತೆ ಮತ್ತೆ ಮಾಡಬೇಕಾಗಿದೆ.

ಸಂಪಾದಕರ ಪ್ರವೇಶಿಕೆ ಈ ಪುಸ್ತಕದ ಹಿನ್ನೆಲೆಯಲ್ಲಿನ ಹಲವು ಕೊಂಡಿಗಳನ್ನು ಸೇರಿಸಿ ಅದರ ಹಿನ್ನೆಲೆಯನ್ನು ವಿವರಿಸುತ್ತದೆ. ಪುಸ್ತಕ ಪ್ರಶ್ನೋತ್ತರದ ರೀತಿಯಲ್ಲಿರುವುದಕ್ಕೂ ಹಿನ್ನೆಲೆಯನ್ನು ನಾಗಭೂಷಣ ಒದಗಿಸಿದ್ದಾರೆ.

ಈ ಪೂರಕ ಸಾಹಿತ್ಯದಿಂದ ಪುಸ್ತಕದ ಓದಿಗೆ ಹೆಚ್ಚಿನ ವಜನು ಸಿಗುತ್ತದೆ. ಈ ನಮ್ಮ ಕಾಲದಲ್ಲಿ ಯಂತ್ರಗಳ ಹಿಂದೆ ಓಡುತ್ತಿರುವ ಸಮಯದಲ್ಲಿ ನಮಗೆ ವಿಜ್ಞಾನ ಯಾಕೆ ಬೇಕು, ಎಲ್ಲಿ ನಾವು ವಿಜ್ಞಾನ ತಂತ್ರಜ್ಞಾನವನ್ನು ಮಿತಿಗೊಳಿಸಬೇಕು ಎನ್ನುವ ಅದ್ಭುತ ಸೂತ್ರವನ್ನು ಗಾಂಧಿಯವರು ಹಾಕಿಕೊಡುತ್ತಾರೆ. ನಮ್ಮ ಕೆಲಸವನ್ನು ಸುಸೂತ್ರಗೊಳಿಸಬಹುದಾದ ಯಂತ್ರಗಳು ಬೇಕು, ಆದರೆ ನಮ್ಮ ಸಹಜೀವಿಗಳನ್ನು ಕೆಲಸದಿಂದ ಉಚ್ಚಾಟಿಸುವ ಯಂತ್ರಗಳು ಬೇಡ. ಜಾಬ್ ಲೆಸ್ ಗ್ರೋಥ್ ಎಂದು ರೋಧಿಸುತ್ತಿರುವ ಸಂದರ್ಭದಲ್ಲಿ ನಮ್ಮ ಅರ್ಥವ್ಯವಸ್ಥೆಗೆ ಒಂದು ಸಮತೋಲನ ಎಲ್ಲಿಂದ ಬರಬಹುದು ಎನ್ನುವುದಕ್ಕೆ ಇದರಲ್ಲಿ ದಿಕ್ಕೂಚಿಗಳಿವೆ. ಪ್ರತಿ ಹೊಸ ತಂತ್ರಜ್ಞಾನವೂ ಉತ್ಪಾದನಾ ಪ್ರಕ್ರಿಯೆಯಲ್ಲಿ ದಕ್ಷತೆಯನ್ನು ತರಬಹುದು. ಆದರೆ ಆ ದಕ್ಷತೆ ಬರುವುದು ಜನರನ್ನು ಉಚ್ಚಾಟಿಸಿ ಬಂಡವಾಳ ಮೂಲದ ಯಂತ್ರಗಳನ್ನು ಸ್ಥಾಪಿಸುವುದರಿಂದಾಗಿ, ಹೀಗಾಗಿ ಒಟ್ಟಾರೆ ದಕ್ಷತೆ ಹೆಚ್ಚಾದರೂ ಅದರ ಜೊತೆಜೊತೆಗೇ ಅಸಮಾನತೆಯೂ ಹೆಚ್ಚುತ್ತದೆನ್ನುವ ಗಹನ ಅರ್ಥಶಾಸ್ತ್ರದ ಸೂತ್ರವನ್ನು ಗಾಂಧಿಯವರು ಸರಳವಾಗಿ ಗ್ರಹಿಸಿದ್ದಲ್ಲದೇ ಮಂಡಿಸಿದ್ದರು.

ಬಂಡವಾಳವೇ ಸುಧಾರಣೆ, ಬೆಳವಣಿಗೆ ಎನ್ನುವ ಈ ಕಾಲದಲ್ಲಿ 'ಹಿಂದ್ ಸ್ವರಾಜ್' ನ ಗಂಭೀರ ಮರುಓದಿನ ಅವಶ್ಯಕತೆ ಎಂದಿಗಿಂತ ಹೆಚ್ಚು ತುರ್ತಿನದ್ದಾಗಿದೆ. ನನ್ನದೊಂದೇ ತಕರಾರು. ನಾಗಭೂಷಣ ಅವರು ಕೃಷ್ಣಶರ್ಮರ ಅನುವಾದವನ್ನು ಬಿಟ್ಟುಕೊಟ್ಟು ಮೊದಲು ಯೋಚಿಸಿದ್ದಂತೆ ತಾವೇ ಮತ್ತೊಂದು ಅನುವಾದ ಮಾಡಿದ್ದರೆ, ಇಂದಿನ ಭಾಷೆಯ ಮೂಲಕ ಸಮಕಾಲೀನ ಛಾಪು ಹಿಂದ್ ಸ್ವರಾಜ್ ಮೇಲೆ ಇನ್ನಷ್ಟು ಗಾಢವಾಗಿ ಬಿದ್ದು, ಅದು ಇನ್ನಷ್ಟು ಪ್ರಸ್ತುತವಾಗುತ್ತಿತ್ತು. ಆದರೂ ಮತ್ತೊಮ್ಮೆ ಗಾಂಧಿಯ ಜೊತೆ ಅನುಸಂಧಾನ ಮಾಡಲು ಈ ಪುಸ್ತಕ ಪ್ರೇರೇಪಿಸುತ್ತದೆ.

-ಪ್ರೊ.ಎಂ.ಎಸ್. ಶ್ರೀರಾಮ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಏಪ್ರಿಲ್ 2019)

Related Books