ಲೇಖಕ ಗೌರೀಶ್ ಕಾಯ್ಕಿಣಿ ಅವರ ಪ್ರಬಂಧ ಕೃತಿ ʼಗಂಡು- ಹೆಣ್ಣು ಮತ್ತು ಪ್ರೀತಿʼ. ಲೇಖಕ ವಿಷ್ಣು ನಾಯ್ಕ ಅವರು ಪುಸ್ತಕದ ಸಂಪಾದಕರ ನುಡಿಯಲ್ಲಿ, “ಪ್ರೀತಿ ಎಂಬ ಮಹಾಸಂಪತ್ತು ಮನುಷ್ಯ ಜಾತಿಗೆ, ಗಂಡು-ಹೆಣ್ಣಿಗೆ ಮಾತ್ರ ಮೀಸಲಿಟ್ಟಿದ್ದು ಎಂಬ ಭ್ರಮೆ ಅನೇಕರಿಗಿದೆ. ಗಂಡು-ಹೆಣ್ಣು (ಗಂಡ-- ಹೆಂಡತಿ) ವಿಚಾರವಾಗಿಯೂ ಆತ ಈ ಕ್ಷೇತ್ರ ತಮ್ಮದೇ ಎಂಬ 'ಭ್ರಮೆಯಲ್ಲಿರುವಂತೆ ಕಾಣುತ್ತದೆ. ಸೂಕ್ತಾತಿಸೂಕ್ಷ್ಮ ದೃಷ್ಟಿಗಳಿಗೆ ಜೀವಕೋಟಿಗಳಲ್ಲೆಲ್ಲ ಈ ಪ್ರೀತಿ, ಬಂಧುತ್ವ, ಗಂಡು-ಹೆಣ್ಣಿನ ಸಂಬಂಧಗಳು ಮನುಷ್ಯನಷ್ಟೇ, - ಒಮ್ಮೊಮ್ಮೆ ಅದಕ್ಕೂ ಮಿಗಿಲಾಗಿ ಇರುವುದನ್ನು ಕಾಣಬಹುದಾಗಿದೆ. ಬೌದ್ಧಿಕ ಸಾಮರ್ಥ್ಯದಲ್ಲಿ ಕೂಡ ವಿಶ್ವದ ಯಾವುದೋ ಒಂದು ಕಡೆ ಅಥವಾ ಹಲವು ಕಡೆ ಮನುಷ್ಯನಿಗಿಂತ ಹಲವು ಪಟ್ಟು ಮುಂದಿರುವ ಜೀವಗಳು ಇದ್ದಿರಬೇಕು ಎಂಬ ಬಗ್ಗೆ ಈಗಾಗಲೇ ಊಹೆ ಗಟ್ಟಿಗೊಂಡು ಹುಡುಕಾಟ ಆರಂಭವಾಗಿದೆ. ಸದ್ಯಕ್ಕೆ ಮನುಷ್ಯ ಇತರ ಪ್ರಾಣಿಗಳಿಗಿಂತ ಹೆಚ್ಚು ಬುದ್ಧಿವಂತ ಎಂಬುದನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ ಈ ಬುದ್ಧಿವಂತರ ಬದುಕಿನಲ್ಲಿ ಗಂಡು-ಹೆಣ್ಣುಗಳೆಂಬ ಎರಡು ಮುಖ್ಯ ಜೈವಿಕ ಪ್ರಭೇದಗಳಿರುವುದು ಮತ್ತು ಆ ಎರಡೂ ವರ್ಗಗಳು ಪ್ರೀತಿ ಎಂಬ ಅದ್ಭುತ ಶಕ್ತಿಯಿಂದ ಬಂಧಿಯಾಗಿರುವುದು ಯಾವ ಕಾಲದಲ್ಲೂ ಅಧ್ಯಯನ ಯೋಗ್ಯವೇ ಆಗಿದೆ. ಈ ಪ್ರೀತಿ ಜಗತ್ತಿನ ಸಾಹಿತ್ಯಕ್ಕೆ ಪ್ರೇರಣೆಯನ್ನು ಕಟ್ಟಿಕೊಟ್ಟಷ್ಟು ಪ್ರಮಾಣದಲ್ಲಿ ಬೇರೆ ಯಾವ ಸಂಗತಿಗಳೂ ಹಿಡಿದು ಕೊಟ್ಟಿಲ್ಲ. ಭಾರತೀಯ ಸಾಹಿತ್ಯದಲ್ಲೂ ಕೂಡಾ ರಾಮಾಯಣ-ಮಹಾಭಾರತಾದಿಗಳಿಂದ ಇಂದಿನವರೆಗೆ ಎಲ್ಲ ಪುರಾಣಗಳಿಗೂ, ಇತಿಹಾಸಗಳಿಗೂ ಮತ್ತು ವರ್ತಮಾನದ ಸಂಗತಿಗಳಿಗೂ ಗಂಡು-ಹೆಣ್ಣಿನ ಮಧ್ಯದ ಪ್ರೀತಿ, ದ್ವೇಷ, ಅಸೂಯೆ, ಆತಂಕ, ಆಡಂಬರ - ಹೀಗೆ ಯಾವ ಯಾವುದೋ ಕಾರಣಗಳೇ ಪ್ರೇರಣೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ಪಾತ್ರ ಎಂಥದು - ಎಂಬ ಬಗ್ಗೆ ಹೆಚ್ಚಿನ ಕುತೂಹಲ ಉಳ್ಳವರಿಗೆ, ಅಧ್ಯಯನಕ್ಕೆ ಎಳೆಸುವವರಿಗೆ ಡಾ. ಗೌರೀಶ ಕಾಯ್ಕಿಣಿಯವರು ಸುಮಾರು ಅರವತ್ತು ವರ್ಷಗಳಷ್ಟು `ಹಿಂದೆ ಬರೆದ ʻಗಂಡು-ಹೆಣ್ಣು ಮತ್ತು 'ಪ್ರೀತಿʼ ಎಂಬ ಹೊತ್ತಿಗೆ ಅನೇಕ ವಿಚಾರಗಳನ್ನು ತೆರೆದಿಡುತ್ತವೆ" ಎಂದು ಹೇಳಿದ್ದಾರೆ.
©2024 Book Brahma Private Limited.