ದೇವನೂರು ಮಹಾದೇವ ಕನ್ನಡ ಸಾಹಿತ್ಯ ಲೋಕದಲ್ಲಿನ ಸೂಕ್ಷ್ಮ ಬರಹಗಾರ, ಹೋರಾಟಗಾರ. ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಗೊಂಡಿರುವ ಇವರು ’ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಕರ್ತೃ. ನಿರಂತರ ಓದು, ಕ್ರಿಯೆಗಳ ಮೂಲಕ ಅರಿವನ್ನು ಬೆಳೆಸಿಕೊಳ್ಳಲು ಪೂರಕವಾಗಿರುವ ,ಸಮಾಜವಾದಿ ಚಿಂತನೆಯ ಈ ಕಾಲದ ಹೊಸ ಮಾದರಿಯಂತೆ ಮಹತ್ವದ ಸಾಂಸ್ಕೃತಿಕ ಪಠ್ಯವಾಗಿದೆ. ದೇವನೂರರ ಪ್ರತಿಕ್ರಿಯೆಗಳು, ಭಾಷಣಗಳು, ಸಾಹಿತ್ಯಕ ನಿಲುವುಗಳು, ಚಳುವಳಿಗಳಿಗೆ ಸಲಹೆಗಳು, ಮಾನವ ವರ್ತನೆಯ ವಿಶ್ಲೇಷಣೆ, ವಿಕೇಂದ್ರೀಕರಣ, ಅಂತರಾಷ್ಟ್ರೀಯ ಘಟನೆಗಳು, ಕೃಷಿ, ಹೆಣ್ಣು, ಜಾತಿ, ಕಥನದ ಚಿಂತನೆಗಳು, ರಾಜಕೀಯ ನಿಲುವು, ಅರಿವಿನ ನುಡಿ, ಇವೆಲ್ಲವನ್ನೂ ಒಳಗೊಂಡ ಬರಹಗಳು ,ಪ್ರಗತಿಪರ ಚಿಂತನೆಗಳು ನಿರಂತರವಾಗಿ ಕಂಡುಕೊಳ್ಳಬೇಕಾದ ಅರಿವಿನ ದಾರಿ ಎದೆಗೆ ಬಿದ್ದ ಅಕ್ಷರದಲ್ಲಿ ಸಿಗುವ ಮುಖ್ಯ ಅಧ್ಯಯನದ ವಸ್ತುಗಳು.’ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಇಂದಲ್ಲ ನಾಳೆ ಫಲ ಕೊಡುವುದು’ ಎನ್ನುವ ದೇವನೂರು ಮಹಾದೇವರ ಮನೋಧೋರಣೆ ಪಠ್ಯದುದ್ದಕ್ಕೂ ಇರುವಂತದ್ದು.
ಅನೇಕ ಸಂದರ್ಭದಲ್ಲಿನ ಮಾತುಕತೆಗಳು, ಚರ್ಚೆಗಳು, ಭಾರತೀಯ ಸಮಾಜವನ್ನು ಅರಿಯಲು ಪೂರಕವಾದ ಅಂಶಗಳನ್ನುಈ ಪುಸ್ತಕ ಒಳಗೊಂಡಿದೆ.’ಒಂದು ಸಮುದಾಯದ ಬದುಕನ್ನು ಬಂಡೆಗಳಿಗೆ ಹೋಲಿಸುತ್ತಲೇ ಮೂರ್ಛಾವಸ್ಥೆಯಲ್ಲಿರುವ ನಮ್ಮೊಳಗಿನ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ ಎಂದು ಇನ್ನೊಂದು ಸಮುದಾಯಕ್ಕೆ ಕರೆ ಕೊಡುತ್ತಾರೆ. ಕೆಲವರಲ್ಲಿನ ಕಾರುಣ್ಯ ಎಚ್ಚರಗೊಳ್ಳದೆ ಇದ್ದಲ್ಲಿ ಹಲವರ ಬದುಕು ಬಂಡೆಗಳ ಮೇಲೆಯೇ ಚಿಗುರೊಡೆಯಬೇಕಾಗಬಹುದು’ ಎನ್ನುವ ದೇವನೂರರ ಎಚ್ಚರಿಕೆ ನೀಡುವ ಇಂತಹ ಮಾತುಗಳನ್ನೊಳಗೊಂಡ ತೊಂಭತ್ತು ಲೇಖನಗಳು ಎದೆಗೆ ಬಿದ್ದ ಅಕ್ಷರದಲ್ಲಿದೆ.
ದೇವನೂರು ಮಹಾದೇವ ಅವರ"ಎದೆಗೆ ಬಿದ್ದ ಅಕ್ಷರ " ಪುಸ್ತಕ ಪರಿಚಯ introduced by-Parashivappa K.B.
©2024 Book Brahma Private Limited.