ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ವೈಚಾರಿಕ ಸಾಹಿತ್ಯ ಕೃತಿ-ಬಾಳ್ವೇಯೇ ಬೆಳಕು. ಲೇಖಕರು ತಮ್ಮ ಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದಾರೆ. ಈ ಜಗತ್ತಿನಲ್ಲಿ ನಮ್ಮ ಹುಟ್ಟು ಒಂದು ನಿಗದಿತ ಉದ್ದೇಶಕ್ಕೆ ಇದೆ. ಅದನ್ನು ಸಾಕಾರಗೊಳಿಸಬೇಕು. ತಪ್ಪಿದರೆ, ಜೀವನಕ್ಕೆ ಯಾವುದೇ ಅರ್ಥವಿರದು. ಈ ಜಗತ್ತಿಗೆ ನಮ್ಮ ಅನಿವಾರ್ಯತೆ ಇಲ್ಲದಿದ್ದರೆ ನಾವು ಎಂದೋ ಸಾಯಬಹುದಿತ್ತು. ಇರುವಷ್ಟು ದಿನ ಕಾಲ ನಮ್ಮ ಅಗತ್ಯ ಈ ಜಗತ್ತಿಗೆ ಇದೆ. ಅದನ್ನು ತಿಳಿದು ಮಾನವೀಯತೆಯಿಂದ ಬದುಕಬೇಕು ಎಂಬ ದೃಷ್ಟಿ ಈ ಕೃತಿಯಲ್ಲಿ ನೀಡಿದ್ದಾರೆ.
ಬಾಳ್ವೆಯೇ ಬೆಳಕು ಎಂಬುದು ಲೇಖಕರ ಅರ್ಥದಲ್ಲಿ ಜೀವನ ಧರ್ಮ. ಬದುಕಿನ ಪ್ರಶ್ನೆಗೆ ಯಾರೋ ಒಬ್ಬರು ಉತ್ತರಿಸುವುದು, ಮತ್ತೊಬ್ಬರು ಅದನ್ನು ವ್ಯಾಖ್ಯಾನಿಸುವುದು, ಮಗದೊಬ್ಬರು ಅದರಂತೆ ನಡೆಯುವುದು, ಅನುಭವಿಸುವುದು ಅದಲ್ಲ. ಬಾಳು ಎಂದರೆ ಎಲ್ಲವನ್ನೂ ಒಬ್ಬರೇ ಅನುಭವಿಸುವುದು. ಹೋರಾಡುವುದು. ಪ್ರಶ್ನಿಸಿ ಉತ್ತರ ಕಂಡುಕೊಳ್ಳುವುದು. ಅವನ ದುಡಿಮೆಗೆ ಅವನೇ ಹಣ ಗಳಿಸಬೇಕು. ಅವನ ಬದುಕಿನ ಮೂಲಕವೇ ಬದುಕಿನ ಅರ್ಥ ಕಂಡುಕೊಳ್ಳಬೇಕು ಎಂಬ ವಿಚಾರವನ್ನು ಒಳಗೊಂಡಿದೆ.
ಭೀತಿಯಿಂದ ಹುಟ್ಟಿದ ಮನೋಧರ್ಮ, ಹೊಸ ಬೆಳಕಿಗೆ ತೊಡಕಾದ ಹಳೆಯ ತೆರೆಗಳು, ನಮ್ಮ ಅಳತೆಯನ್ನು ಮೀರಲಾಗದ ದೇವರು, ಬಾಳ್ವೆ ಸ್ವೀಕಾರಕ್ಕಿದೆ; ನಿರಾಕರಣೆಗಲ್ಲ, ನಮ್ಮ ನೋಟದ ಮುಖ್ಯ ಕೊರತೆಗಳು, ವೈಯಕ್ತಿಕ ಆತ್ಮ, ವೈಯಕ್ತಿಕ ಕರ್ಮ, ಜೀವನದ ಹಾದಿಯಲ್ಲಿ ಅಭಿವೃದ್ಧಿಗೆ ಕಾರಣರು, ಜೀವನ ಅಮರ, ಹುಟ್ಟು-ಸಾವು ತಾತ್ಕಾಲಿಕ, ಇಂದು ದೊಡ್ಡದು, ವಿಸ್ತೃತ ಜೀವನ, ಸ್ವಾರ್ಥದ ಮಿತಿ, ವ್ಯಕ್ತಿಯ ಹಕ್ಕು, ಜೀವನ ನೀತಿ ಹೀಗೆ ವಿವಿಧ ಆಧ್ಯಾಯಗಳ ಮೂಲಕ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.
ಧಾರವಾಡದ ಸಮಾಜ ಪುಸ್ತಕಾಲಯವು 1945ರಲ್ಲಿ (ಪುಟ: 152) ಮೊದಲಬಾರಿಗೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1950ರಲ್ಲಿ (ಪುಟ: 151) ಈ ಕೃತಿಯನ್ನು ಪ್ರಕಟಿಸಿತು. ನಂತರ ಹಲವು ಮುದ್ರಣಗಳನ್ನು ಕಂಡಿದೆ.
‘ಬಾಳ್ವೇಯೇ ಬೆಳಕು’ – ಶಿವರಾಮ ಕಾರಂತ-ಪುಸ್ತಕಪ್ರೇಮಿ
---
ನನ್ನ ಬದುಕಿನ ಪಥ ಬದಲಿಸಿದ ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು’
ಪುಸ್ತಕವನ್ನು ಇಡಿಯಾಗಿ ಮತ್ತೆ ಮತ್ತೆ ಓದಿದ ಮೇಲೆ ಅದು ಇನ್ನಷ್ಟು ಆಪ್ತವಾಯಿತು. ನನ್ನೊಳಗೆಲ್ಲೋ ಅನೇಕ ಕಿಟಕಿಗಳು ತೆರೆದುಕೊಂಡು ಅನೇಕ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿತ್ತು.
1973 ರಲ್ಲಿ ಪಿ.ಯು.ಸಿ.ಗೆ ಬೆಂಗಳೂರಿನ ಅವ ಬಸವನಗುಡಿ ನ್ಯಾಷನಲ್ ಕಾಲೇಜು ಸೇರಿದ್ದೆ. ಕನ್ನಡ ಉಪನ್ಯಾಸಕರಾಗಿದ್ದ ಕ.ನಂ, ನಾಗರಾಜುರವರು ಶಾಂತ ಸಾಗರದಂತೆ ಇದ್ದು ಯಾವುದೇ ಘಳಿಗೆಯಲ್ಲಿ ಸಿಡಿದೇಳಬಹುದಾದ ಗುಣ ಹೊಂದಿದ್ದರು. ಆದುದರಿಂದ ಅವರ ತರಗತಿಗಳಲ್ಲಿ ಹುಡುಗರು ಗಲಾಟೆ ಮಾಡುತ್ತಿರಲಿಲ್ಲ. ಅವರು ಯಾವುದೇ ತರಗತಿಗೆ ಸರ್ವಸಿದ್ಧತೆಯಿಂದ ಬರುತ್ತಿದ್ದರು. ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ 'ನಮ್ಮ ಅಳತೆಯನ್ನು ಮೀರಲಾರದ ದೇವರು' ಎಂಬ ಪಾಠವಿತ್ತು. ಅದರ ಲೇಖಕರು ಶಿವರಾಮ ಕಾರಂತರಾಗಿದ್ದರು. ಮೇಷ್ಟಿಗೆ ಪಾಠದ ತಿರುಳಿನ ಜೊತೆ ಸಹಮತ ಇತ್ತೆಂದು ಕಾಣುತ್ತದೆ. ಆದ್ದರಿಂದ ಪಾಠವನ್ನು ಅನುಭವಿಸಿ ಹೇಳುತ್ತಿದ್ದರು.
ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಕಾದಂಬರಿಗಳನ್ನು ಓದುತ್ತಿದೆ. ತಂದೆಯವರು ಪ್ರೌಢಶಾಲಾ ಶಿಕ್ಷಕರಾಗಿದ್ದು, ಶಾಲಾ ಗ್ರಂಥಾಲಯದ ಪ್ರಭಾರ ವಹಿಸಿಕೊಂಡಿದ್ದರು. ಅವರಿಗೆ ಅಲ್ಪಸ್ವಲ್ಪ ಸಾಹಿತ್ಯದ ಒಲವಿದ್ದುದರಿಂದ ನಮ್ಮ ಮನೆಯಲ್ಲಿ ಅನೇಕ ಮಸ್ತಕಗಳಿರುತ್ತಿದ್ದವು. ಉದಾಹರಣೆಗೆ ಕಂಬನಿಯ ಕುಯಿಲು, ರತ್ನನ ಪದಗಳು, ಬೆಳುವಲದ ಮಡಿಲಲ್ಲಿ ಇತ್ಯಾದಿ. ಆಗಲೇ ನಾನು ತ್ರಿವೇಣಿ, ಕೆ.ವಿ.ಅಯ್ಯರ್, ರಾಜರತ್ನಂ ಮುಂತಾದವರ ಬಗ್ಗೆ ಪ್ರೀತಿ, ಅಭಿಮಾನವನ್ನು ಬೆಳೆಸಿಕೊಂಡಿದ್ದೆ.
ಆದರೆ ಕಾರಂತರ ಪಾಠ ಇವೆಲ್ಲವುಗಳಿಗಿಂತಲೂ ಬೇರೆ ಥರದ ಓದಾಗಿತ್ತು. ಅದು ಅದುವರೆಗಿನ ನನ್ನ ತಿಳುವಳಿಕೆಯನ್ನು ಗೇಲಿ ಮಾಡುವಂತಿತ್ತು. ಪಾಠದ ಪ್ರತಿ ಪದವೂ ಪ್ರಾಮಾಣಿಕತೆಯಿಂದ ಕೂಡಿದ್ದುದಾಗಿತ್ತು. ತನ್ನ ಅನುಭವಕ್ಕೆ ಬಂದ ಸತ್ಯವನ್ನು ಮಾತ್ರ ಹೇಳುತ್ತಿತ್ತು. ನಾನು ಅದುವರೆಗೆ ತಿಳಿದುಕೊಂಡು ಬಂದ ವಿಚಾರಕ್ಕೆ ತದ್ವಿರುದ್ಧವಾದುದಾಗಿತ್ತು. ಆ ಪಾಠವನ್ನು ಓದುತ್ತೋದುತ್ತ ಒಬ್ಬ ಸತ್ಯಾನ್ವೇಷಿಯ ಎದುರು ಕುಳಿತಂತೆ ಭಾಸವಾಯಿತು. ನನ್ನೆದುರು ಲೇಖಕ ಪಟ್ಟುಹಿಡಿದು ಕೂತಿದ್ದ. ನಾನು ಅತ್ತಿತ್ತ ಮಿಸುಕಾಡದಂತೆ ಚಿತ್ತಾಗಿ ಹೋಗಿದ್ದೆ. ಮುಕ್ತ ಚಿಂತನೆಯ ಫಲವಾಗಿತ್ತು ಆ ಪಾಠ. ಜನರ ಒಳಿತೊಂದೇ ಅದರ ಉದ್ದೇಶವಾಗಿತ್ತು. ನೇರವಾಗಿಯೂ, ಸರಳವಾಗಿಯೂ ಜನರಿಗೆ ತಲುಪಿಸುವುದೊಂದೇ ಅದರ ತಂತ್ರಗಾರಿಕೆಯಾಗಿತ್ತು.
ಆ ಪಾಠ ನನ್ನನ್ನು ಪುಸ್ತಕದ ಅಂಗಡಿಗೆ ಓಡಿಸಿಕೊಂಡು ಹೋಯಿತು. ಪಾಠವನ್ನು ಆಯ್ಕೆ ಮಾಡಿದ್ದ ಶಿವರಾಮ ಕಾರಂತರ ‘ಬಾಳ್ವೆಯೇ ಬೆಳಕು’ ಪುಸ್ತಕವನ್ನುಕೊಂಡು ತರಬೇಕಿತ್ತು. ಅದೇ ಪ್ರಥಮ ಬಾರಿಗೆ ನಾನೊಬ್ಬ ಅದೃಶ್ಯ ಗುರುವಿನ ಮಾಂತ್ರಿಕತೆಗೆ ಒಳಗಾಗಿದ್ದೆ.
ಆ ಪುಸ್ತಕವು ಕೇವಲ ನೂರು ಪುಟಗಳರುವ ಸಣ್ಣ ಪುಸ್ತಕ, ಕೆಲವೇ ಗಂಟೆಗಳಲ್ಲಿ ಓದಿ ಮುಗಿಸುವಷ್ಟು! ಮಸ್ತಕವನ್ನು ಇಡಿಯಾಗಿ ಮತ್ತೆ ಮತ್ತೆ ಓದಿದ ಮೇಲೆ ಅದು ಇನ್ನಷ್ಟು ಆಪ್ತವಾಯಿತು. ನನ್ನೊಳಗೆಲ್ಲೋ ಅನೇಕ ಕಿಟಕಿಗಳು ತೆರೆದುಕೊಂಡವು. ಅನೇಕ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿತ್ತು. ಎಲ್ಲ ದೇವರು, ಧರ್ಮಗಳ ಬಗ್ಗೆ ಹೊಸ ಚಿಂತನೆ ತರದುಕೊಳ್ಳುತ್ತಾ ಹೋಯಿತು. ಎಲ್ಲರ ಅನುಭವ ಒಂದೇ ಆಗಿರಬೇಕಿಲ್ಲ ಎಂಬ ಸರಳ ಸತ್ಯವನ್ನು ಪುಸ್ತಕ ಹೇಳುತ್ತಿತ್ತು. ನನ್ನ ಬದುಕಲ್ಲಿ ಹೊಸ ಉತ್ಸಾಹ, ಮೂಡಿತು. ಅರಿವಿನ ಕ್ಷಿತಿಜಗಳು ಹಿಗ್ಗಿಕೊಂಡವು. ಬದುಕಿನಲ್ಲಿ ವಿಮರ್ಶಾತೀತವಾದದ್ದು ಏನೂ ಇಲ್ಲ ಎಂಬುದನ್ನು ತಿಳಿಸಿತ್ತು. ನನಗೆ ಆಪ್ತ ಬರಹಗಾರನೊಬ್ಬ ಸಿಕ್ಕಿದ್ದ.
ಅನೇಕ ಸಂಗತಿಗಳ, ಅಭಿರುಚಿಗಳ ಈ ಪ್ರಪಂಚದಲ್ಲಿ ನನ್ನಂಥ ಚಂಚಲಚಿತ್ತರು. ಸಾಹಿತ್ಯಲೋಕಕ್ಕೆ ಇಲ್ಲಿಯವರೆಗೆ ಅಂಟಿಕೊಂಡಿರುವುದಕ್ಕೆ 'ಬಾಳ್ವೆಯೇ ಬೆಳಕು' ಕಾರಣವಾಯಿತು. ಆಗ 16-17 ವರ್ಷದ ನಾನು ಕಾರಂತರಿಂದ ಎಷ್ಟು ಆಕರ್ಷಿತನಾದನೆಂದರೆ ಪಿಯುಸಿಯಲ್ಲಿ ಓದುತ್ತಿದ್ದರೂ ಅವರ 30ಕ್ಕೂ ಹೆಚ್ಚು ಕಾದಂಬರಿಗಳನ್ನು ಅದೇ ವರ್ಷ ಓದಿ ಮುಗಿಸಿದೆ. ಇದಾದ ನಂತರದ ಐವತ್ತು ವರ್ಷಗಳಲ್ಲಿ ಅನೇಕ ಬರಹಗಾರರ ಪುಸ್ತಕಗಳು ನನ್ನನ್ನು ಪ್ರಭಾವಿಸಿವೆ. ಆದರೆ ಮೊದಲ ಬಾರಿಗೆ ನನ್ನ ಕೈಹಿಡಿದದ್ದು ಮತ್ತು ಭದ್ರ ಬುನಾದಿ ಹಾಕಿದ್ದು 'ಬಾಳ್ವೆಯೇ ಬೆಳಕು' ಮಸ್ತಕವೇ. ಜೀವನದ ಅನೇಕ ಬಿಕ್ಕಟ್ಟುಗಳಲ್ಲಿ ಅದು ನನ್ನ ಸಹಾಯಕ್ಕೆ ಬಂದಿದೆ. ನನ್ನ ಪ್ರಜೆಯ ಭಾಗವಾಗಿ ಉಳಿದುಬಿಟ್ಟಿದೆ.
(ಕೃಪೆ : ಹೊಸಮನುಷ್ಯ. ಬರಹ : ಮಿರ್ಜಾ ಬಷೀರ್, ಪಶುವೈದ್ಯಕೀಯ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಖ್ಯಾತ ಕನ್ನಡ ಕಥೆಗಾರರು, ತುಮಕೂರು)
©2024 Book Brahma Private Limited.