‘ಅಪರಿಮಿತದ ಕತ್ತಲೆ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ವೈಚಾರಿಕ ಲೇಖನಗಳ ಸಂಕಲನ. ಈ ಕೃತಿಗೆ ಡಾ.ಕೆ.ಎಸ್. ಭಗವಾನ್ ಬೆನ್ನುಡಿ ಬರೆದಿದ್ದಾರೆ. ಈ ದೇಶವನ್ನು ಕಾಡುತ್ತಿರುವ ಸಂಗತಿಗಳೆಂದರೆ ಹಸಿವು ಮತ್ತು ಅವಮಾನ. ಈ ಎರಡು ಗೋಳುಗಳು ಇಲ್ಲಿನ ಎಲ್ಲ ಲೇಖನಗಳ ಉಸಿರಾಗಿವೆ. ಇದು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬೌದ್ಧಿಕ ಉನ್ನತಿಕೆಯನ್ನು ಮತ್ತು ಜೀವಪರ ಕಾಳಜಿಯನ್ನು ಪ್ರಕಟಿಸುತ್ತದೆ. ಇಲ್ಲಿನ ಎಲ್ಲ ಬರಹಗಳು ಮಾನವೀಯ ತುಡಿತದ ಬಿಸಿಯು ಅನುಭವ ಓದುಗರಿಗೆ ನೀಡುತ್ತದೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್ತು ಜಿನೀವಾದಲ್ಲಿ ನಡೆದ ಸಭೆಯಲ್ಲಿ ಜಾತಿಯಾಧಾರಿತ ತಾರತಮ್ಯವನ್ನು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಪರಿಗಣಿಸಿ ಎಂದು ಠರಾವು ಪಾಸುಮಾಡಿದೆ. ಭಾರತ ಈ ಠರಾವನ್ನು ವಿರೋಧಿಸುತ್ತಿದೆ ಎಂದರೆ ಏನರ್ಥ? ಭಾರತ ತನ್ನ ಹುಳುಕನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಸಹ ಮಾನವರಿಗೆ ನಾಗರಿಕ ಹಕ್ಕುಗಳನ್ನು ಕೊಡಲು ಅದು ಸಾಧ್ಯವಿಲ್ಲ. ಅಲ್ಲವೇ? ಏಕೆಂದರೆ ಜಾತಿ, ಭ್ರಷ್ಟಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ದೇಶ ಅರಿತುಕೊಳ್ಳಬೇಕಾಗಿದೆ. ಇವು ಕೃತಿಯೊಳಗಿನ ಸೂಕ್ಷ್ಮ ಅವಲೋಕನಗಳು. ಜಾತಿ ವಿನಾಶ ಮಾಡಲು ಏಕಮುಖ ಹೋರಾಟ ಸಾಲದು ಎಂದು ಲೇಖಕ ಚಿನ್ನಸ್ವಾಮಿ ಕಂಡುಕೊಂಡಿದ್ದಾರೆ. ಅವರು ಹೇಳುವುದು ಸತ್ಯವಾದದ್ದು. ‘ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಎಲ್ಲರೂ ಒಟ್ಟಾಗಿ ಹೋರಾಡಿದಾಗ ಮಾತ್ರ ಜಾತಿ ಭೇದ ಮತ್ತು ಅಸ್ಪೃಶ್ಯತೆ ನಾಶವಾಗಬಹುದು’, ಇದು ಸರಿಯಾದ ನಿಲುವು ಎನಿಸುತ್ತದೆ ಎನ್ನುತ್ತಾರೆ ಲೇಖಕ ಕೆ.ಎಸ್. ಭಗವಾನ್.. ಅಪರಿಮಿತದ ಕತ್ತಲೆ ಕೃತಿಯ ಬರಹಗಳು ವಿಚಾರ ದೀಪ್ತಿಯಿಂದ ಕೂಡಿವೆ. ಎಲ್ಲಾ ತಾರತಮ್ಯಗಳು ತೊಲಗಿ ತಿಳಿವು ಬೆಳಗಲಿ ಎಂಬ ಆಶಾವಾದ ಈ ಕೃತಿಯದು.
©2024 Book Brahma Private Limited.