ಲೇಖಕ ಮಂಜುನಾಥ ಉಲವತ್ತಿ ಶೆಟ್ಟರ್ ಅವರ ಲೇಖನಗಳ ಸಂಗ್ರಹ ಕೃತಿ-ಅನುರಣನ. ಸಾಮಾಜಿಕ, ಆರ್ಥಿಕ ಸಮಸ್ಯೆಗಳೊಂದಿಗೆ ವೃತ್ತಿ ಶಿಕ್ಷಣದ ಸಾಧ್ಯತೆಗಳ ಕುರಿತು ಬರೆದವುಗಳು. (ಸಾಮಾಜಿಕ, ಆರ್ಥಿಕ ಸಮಸ್ಯೆ. ವ್ಯಕ್ತಿಚಿತ್ರಣ ಕುರಿತ ಆಯ್ದ ಬರಹಗಳು) ಈ ಪುಸ್ತಕದಲ್ಲಿನ 40 ಲೇಖನಗಳನ್ನು 'ಬದಲಾವಣೆ', 'ವ್ಯಕ್ತಿಚಿತ್ರಣ' ಮತ್ತು 'ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳು' ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿ ವಿಶ್ಲೇಷಿಸಲಾಗಿದೆ. ವಿವಿಧ ಲೇಖನಗಳ ಮೂಲಕ ವಾಸ್ತವದ ನೆಲೆಯಲ್ಲಿ ತಮ್ಮ ಕಾಲದ ಆಗುಹೋಗುಗಳನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಈ ಲೇಖನಗಳಲ್ಲಿ ಎದ್ದು ಕಾಣುತ್ತಿದೆ. ಜಾತಿಗಳು, ಅಸಹಿಷ್ಣುತೆ, ಮದ್ಯಪಾನ, ಸರ್ವಾಧಿಕಾರ, ಅತ್ಯಾಚಾರ, ಭಯೋತ್ಪಾದನೆ, ಮೌಢ್ಯಾಚರಣೆ, ಸ್ಮಾರಕಗಳ ರಕ್ಷಣೆ, ಅಸಮಾನತೆ ಮುಂತಾದವು ಅವರಿಗೆ ಕಾಡುವ ಪ್ರಮುಖ ಸಮಸ್ಯೆಗಳಾಗಿವೆ.
ಬಸವೇಶ್ವರ, ಕನಕದಾಸರು, ವಿವೇಕಾನಂದ, ಅಂಬೇಡ್ಕರ್, ಶಿವರಾಮ ಕಾರಂತ, ಎಪಿಜೆ ಅಬ್ದುಲ್ ಕಲಾಂ, ಕುವೆಂಪು, ಗಾಂಧೀಜಿ, ನಾರಾಯಣ ಗುರು, ಲಾಲಬಹಾದ್ದೂರ ಶಾಸ್ತ್ರಿ ಅಂಥ ಧೀಮಂತರು ಅವರಿಗೆ ಆದರ್ಶ ಮೂರ್ತಿಗಳಾಗಿದ್ದಾರೆ. ಇವೆಲ್ಲವುಗಳ ಮಧ್ಯೆ ಸಾಮರಸ್ಯದ ಭಾರತೀಯ ಪರಂಪರೆ ಅವರಿಗೆ ಆಶಾದಾಯಕವಾಗಿ ಚಿಂತಿಸಲು ಸಹಕರಿಸುತ್ತಿದೆ. ಅವರ ಚಿಂತನೆಗಳು ಎಡ ಬಲ ಸಿದ್ಧಾಂತಗಳಿಂದ ಕೂಡಿರದೆ ಉದಾರವಾದಿ ನೀತಿಯನ್ನು ಎತ್ತಿ ಹಿಡಿಯುವಂಥವುಗಳಾಗಿವೆ. ಅವರ ವಿಮರ್ಶಾತ್ಮಕ ನಿಲವು ನಿಷ್ಪಕ್ಷಪಾತದಿಂದ ಕೂಡಿದುದಾಗಿದೆ.
ಮೌಢ್ಯಾಚರಣಗೆ ಮುಖ್ಯವಾಗಿ ಮಕ್ಕಳು ಮತ್ತು ಮಹಿಳೆಯರು ಬಲಿಯಾಗುತ್ತಾರೆ. ಲಿಂಗತಾರತಮ್ಯಕ್ಕೂ ಅತ್ಯಾಚಾರಕ್ಕೂ ಸಂಬಂಧವಿದೆ. ಇದೊಂದು ರೀತಿಯ ಭಯೋತ್ಪಾದನೆಯೆ ಆಗಿದೆ ಎಂದು ಲೇಖಕರು ವಿಷಾದ ವ್ಯಕ್ತಪಡಿಸುತ್ತಾರೆ.
ಹೆಣ್ಣನ್ನು ಮನುಷ್ಯರಂತೆ ಕಾಣಲು ಸಿದ್ಧರಿಲ್ಲದ ನಾವು 'ಅವಳನ್ನು ದೇವತೆಯಂತೆ ಕಾಣುತ್ತೇವೆ' ಎಂದು ಸುಳ್ಳು ಹೇಳುತ್ತೇವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಭ್ರಮೆಯಲ್ಲಿಟ್ಟು ಶೋಷಣೆ ಮಾಡುವ ಕ್ರಮವಿದು ಎಂಬ ವಿಚಾರವು ಲೇಖನದ ಜೀವಾಳವಾಗಿದೆ.
©2024 Book Brahma Private Limited.