‘ಅಂಬೇಡ್ಕರ್ ಮತ್ತು ದಲಿತ ರಾಜಕಾರಣ’ ಲೇಖಕ ನಾ. ದಿವಾಕರ ಅವರ ವೈಚಾರಿಕ ಲೇಖನಗಳ ಸಂಕಲನ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ದಲಿತ ರಾಜಕಾರಣ ಮತ್ತು ಅಂಬೇಡ್ಕರ್’ ಎಂಬ ಈ ಕೃತಿಯಲ್ಲಿರುವ ಬಹುಪಾಲು ಬರಹಗಳು ಕೆಲವು ವರ್ಷಗಳ ವಿದ್ಯಮಾನಗಳನ್ನು ಆಧರಿಸಿದ, ಸೈದ್ಧಾಂತಿಕ ಒಳನೋಟವನ್ನು ಕಟ್ಟಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ವಿಶೇಷವಾಗಿ ದಲಿತಪರ ಹೋರಾಟಗಳ ವಿವರಣೆ, ವಿಶ್ಲೇಷಣೆ ಮತ್ತು ಪ್ರತಿಪಾದನೆಗಳಿಗೆ ಸಹಜ ಆದ್ಯತೆ ಲಭ್ಯವಾಗಿದೆ. ಅಂಬೇಡ್ಕರ್ ಅವರ ಆಶಯ ಮತ್ತು ದಲಿತ ರಾಜಕಾರಣದ ವಾಸ್ತವಗಳ ನಡುವೆ ಅನುಸಂಧಾನ ನಡೆಸಲಾಗಿದೆ. ಕೆಲವೊಮ್ಮೆ ಮುಖಾಮುಖಿ ಚರ್ಚೆ ನಡೆಯುತ್ತದೆ. ಅರಿವಿನ ಆಳವನ್ನು ಇಷ್ಟಪಡುವ ದಿವಾಕರ ಅವರು ವೃಥಾ ಆರಾಧನಾ ಮನೋಧರ್ಮವನ್ನು ವಿಮರ್ಶೆಗೆ ಒಡ್ಡುತ್ತಾರೆ. ಅಂಬೇಡ್ಕರ್ ಒಂದು ರೂಪಕವಾಗಿ ವಿಘಟನೆಗೊಳಗಾಗಿದ್ದಾರೆ. ತಾತ್ವಿಕವಾಗಿ ಏಕತೆಯ ದನಿಯಾಗಿದ್ದಾರೆ. ಪ್ರತಿಮೆಯಾಗಿ ಆರಾಧನೆಯ ಕೇಂದ್ರವಾಗಿದ್ದಾರೆ. ಅಂಬೇಡ್ಕರ್ ಅವರ ಚಿಂತನೆ ಮತ್ತು ವ್ಯಕ್ತಿತ್ವವು ವಿವಿಧ ಆಯಾಮಗಳಲ್ಲಿ ವಿಸ್ತರಿಸಿಕೊಂಡ ಅಥವಾ ವಿಸ್ತಕಿಸಲ್ಪಟ್ಟ ವಿಧಾನವನ್ನು ದಿವಾಕರ ಅವರ ಈ ನುಡಿ ನಿರೂಪಣೆಯ ಸಮರ್ಥಾವಾಗಿ ದಾಖಲಿಸುತ್ತದೆ ಎಂದಿದ್ದಾರೆ ಬರಗೂರು ರಾಮಚಂದ್ರಪ್ಪ. ಒಮ್ಮೆ ಅಭಿಪ್ರಾಯಾತ್ಮಕವೂ, ಇನ್ನೋಮ್ಮೆ ಅಧ್ಯಯನಾತ್ಮಕವೂ ಆಗಿರುವ ವಿಭಿನ್ನ ಆಯಾಮಗಳ ಬರಹಗಳನ್ನು ಈ ಕೃತಿಯು ಒಳಗೊಂಡಿದ್ದು ಗಂಭೀರ ಚರ್ಚೆಗೆ ಒತ್ತಾಸೆ ಒದಗಿಸುತ್ತದೆ.
©2024 Book Brahma Private Limited.