`ತುಂಬಿದಹೊಳೆ’ ಲೇಖಕ ವೈ.ಬಿ.ಕಡಕೋಳ ಅವರ ಲೇಖನಗಳ ಸಂಗ್ರಹ ಕೃತಿ. ಒಟ್ಟು 62 ಲೇಖನಗಳು ಸಂಕಲನಗೊಂಡಿವೆ. ಮೊದಲ ವಿಭಾಗ ‘ಜೀವನಶೈಲಿ’ಯಲ್ಲಿ 13 ಲೇಖನಗಳಿವೆ. ನೆರೆಹೊರೆಯವರೊಂದಿಗೆ ಹೇಗಿರಬೇಕು? ಎಂಬುದರಿಂದ ಹಿಡಿದು ವೃದ್ದಾಪ್ಯದವರಗಿನ ಲೇಖನಗಳಿವೆ. ಆಧುನಿಕ ಜೀವನ ಶೈಲಿಯ ವಿಧಾನಗಳು, ಸಲಹೆ, ಸೂಚನೆ, ರಕ್ಷಣೆ, ಆರೋಗ್ಯವಂತ ಸಮಾಜದ ಚಹರೆಗಳನ್ನು ಪರಿಚಯಿಸಲಾಗಿದೆ. ಕಾಯಕದ ಮಹತ್ವ, ನಗುವಿನ ಲಕ್ಷಣ, ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಹೀಗೆ ವಿವಿಧ ವಿಷಯಗಳನ್ನು ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಚರ್ಚಿಸಲಾಗಿದೆ. ‘ಶಿಕ್ಷಣ’ ಎಂಬ ಎರಡನೆಯ ವಿಭಾಗದಲ್ಲಿ ನಮ್ಮ ರಾಷ್ಟ್ರಧ್ವಜ, ನನ್ನ ಗುರುಗಳು ಹೀಗೆ 13 ಲೇಖನಗಳಿವೆ. ಸಮನ್ವಯ ಶಿಕ್ಷಣ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣ, ಸೃಜನಶೀಲತೆ ಕುರಿತು ತಾರ್ಕಿಕ ನೆಲೆಯಲ್ಲಿ ಚಿಂತಿಸಲಾಗಿದೆ. ‘ಲಹರಿ’ ಎಂಬ 3ನೇ ವಿಭಾಗದಲ್ಲಿ ನಾಲ್ಕು ಲೇಖನಗಳಿವೆ. ವಾಸ್ತವಿಕ ವಿಚಾರಗಳು ತಿಳಿಹಾಸ್ಯದ ನೆಲೆಯಲ್ಲಿ ಹರಡಿವೆ. ‘ಜನಪದ’ ಎಂಬ 4ನೇ ವಿಭಾಗದಲ್ಲಿ ನಾಲ್ಕು ಲೇಖನಗಳಿವೆ. ಬೀಸುವ, ಬುಡಬುಡಕೆ, ಹೆಳವರ ಜೀವನ ವಿಧಾನವನ್ನು ಕಟ್ಟಿಕೊಟ್ಟಿದ್ದಾರೆ. ‘ನಮ್ಮ ಸುತ್ತ ಮುತ್ತ’ 5ನೇ ವಿಭಾಗದಲ್ಲಿ ಸವದತ್ತಿ ತಾಲೂಕಿನ ದೇವಿ ಆರಾಧನೆಯ ತಾಣಗಳನ್ನು (ರಟ್ಟರು, ಮುನವಳ್ಳಿ ಶಾಸನ ಹಿನ್ನೆಯಲ್ಲಿ) ಐತಿಹಾಸಿಕ ನೆಲೆಯ ಬರಹಗಳಿವೆ. ‘ಮುಕ್ತ-ಮುಕ್ತ’ ಎಂಬ 6ನೇ ಅಧ್ಯಾಯದಲ್ಲಿ ವಚನ ನಿರ್ವಚನ, ಆಲಮಟ್ಟಿಯಲ್ಲಿ ಶೈಕ್ಷಣಿಕ ಸಮ್ಮೇಳನದ ಸವಿನೆನಪು ಹೀಗೆ ಒಟ್ಟು 23 ಲೇಖನಗಳಿವೆ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ವಿ.ಬಿ. ಸಣ್ಣಸಕ್ಕರಗೌಡರ ‘ಲೇಖಕರದ್ದು ನೆಲಮೂಲ ಸಂಸ್ಕೃತಿ. ಬೆವರು ಸಂಸ್ಕೃತಿಯ ಬಲಕ್ಕೆ ಬಲವಾಗಿ ಅಪ್ಪಿಕೊಂಡು ಅಂದದ-ಚೆಂದದ ಬರಹವನ್ನು ನೀಡಿದ್ದಾರೆ. ಜನಪ್ರಿಯತೆ ಎಂಬ ಬೇತಾಳನ ಬೆನ್ನಿಗೆ ಬೀಳದೇ, ನೈಜತೆಯಿಂದ ಕೂಡಿದ, ಶಬ್ದಾಡಂಬರವಿಲ್ಲದ, ಸಹಜ, ಸರಳ ನಿರೂಪಣೆಯಿಂದ ಇಲ್ಲಿಯ ಬರಹಗಳು ಗಮನ ಸೆಳೆಯುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.