ಮಂಜುನಾಥ್ ಉಲವತ್ತಿ ಶೆಟ್ಟರ್ ಅವರು ಬರೆದ ಅಂಕಣ ಬರಹಗಳ ಸಂಕಲನ-ಪಾಪ ಪರಾಕಾಷ್ಟೆ. ಸ್ವಾತಂತ್ರ್ಯಾನಂತರದಲ್ಲಿ ನಮ್ಮ ದೇಶದ ಸಮಸ್ತ ಸಮಸ್ಯೆಗಳು ಪರಿಹಾರವಾಗಿಲ್ಲ. ಸಂವಿಧಾನಾತ್ಮಕ ಹಕ್ಕು ಹಾಗೂ ಆಶಯಗಳಿಗನುಗುಣವಾಗಿ ಅನೇಕ ಪ್ರಗತಿಪರ ಬೆಳವಣಿಗೆಗಳು ನಮ್ಮ ದೇಶದಲ್ಲಿ ಆಗಿವೆಯಾದರೂ ನಿರೀಕ್ಷಿತ ಗುರಿ ತಲುಪಿಲ್ಲವೆಂಬುದು ವಿಷಾದನೀಯ ಹಾಗೂ ವಾಸ್ತವ. ಕುಲಮೂಲ ಉತ್ಪಾದನಾ ಪದ್ಧತಿಯನ್ನು ಸಕಾರಾತ್ಮಕವಾಗಿಯೇ ಶಿಥಿಲಗೊಳಿಸಿದ ಕೈಗಾರಿಕೀಕರಣವು ಸಾಮೂಹಿಕ ಉತ್ಪಾದನಾ ಪದ್ಧತಿಯ ಮೂಲಕ ಹೊಸ ಬೆಳಕನ್ನು ನೀಡಿದ್ದನ್ನು ಅಲ್ಲಗೆಳೆಯಲಾಗದು. ಹೊಸ ಆರ್ಥಿಕ ಪದ್ಧತಿ ಬಂದಾಗ ಹೊಸ ಸಮಸ್ಯೆಗಳು ಬರುತ್ತವೆಯೆಂಬ ‘ಸತ್ಯ’ವನ್ನು ಕೈಗಾರಿಕರಣಕ್ಕೂ, ಜಾಗತೀಕರಣಕ್ಕೂ ಅನ್ವಯಿಸಬಹುದು. .
ಇತ್ತೀಚಿನ ವರ್ಷಗಳಲ್ಲಿ ಧರ್ಮ, ಸಂಸ್ಕೃತಿ, ದೇಶಭಕ್ತಿ, ದೇಶದ್ರೋಹ, ಸ್ವಾತಂತ್ರ್ಯ ಮುಂತಾದ ಪರಿಕಲ್ಪನೆಗಳಿಗೆ ಅಪಾರ್ಥ ಮತ್ತು ಅಪವ್ಯಾಖ್ಯಾನಗಳನ್ನು ಅಂಟಿಸಿ ಅಬ್ಬರಿಸುವ ‘ಮೂಲಭೂತವಾದಿಗಳು’ ಮುನ್ನೆಲೆಗೆ ಬಂದಿರುವುದು ದೊಡ್ಡ ಸಮಸ್ಯೆಯಾಗಿದೆ, ಈ ಕೃತಿಯಲ್ಲಿರುವ 49 ಬರಹಗಳು ಸಮಸ್ಯೆಗಳ ಸಮಗ್ರತೆಯನ್ನು ತೋರಿವೆ. ಭಾಷೆ ಸಮಸ್ಯೆ, ಶಿಕ್ಷಣ, ಮಹಿಳೆ, ಮಕ್ಕಳು, ಕಿರುತೆರೆ, ವಾಟ್ಸಾಪ್, ಸ್ವಚ್ಚತೆ, ಪ್ರಜಾತಂತ್ರ, ರಾಜಕೀಯ ಕುತಂತ್ರ, ರೈತ, ಉದ್ಯಮ ರಕ್ಷಣೆ, ಕಪ್ಪುಹಣ, ಬಡತನ, ಕಾರ್ಪೊರೇಟ್ ವಲಯ, ತಂತ್ರಜ್ಞಾನ, ಹೀಗೆ ವಸ್ತುವೈವಿಧ್ಯವೇ ತುಂಬಿಕೊಂಡ ವಿವರಣೆ ವಿಶ್ಲೇಷಣೆಗಳ ಹೊರಣವನ್ನು ಪಾಪ ಪರಾಕಾಷ್ಠೆಯಲ್ಲಿ ಉಣಬಡಿಸಲಾಗಿದೆ. ‘ಪಾಪ ಪರಾಕಷ್ಟೆ’ ಎಂಬ ಶೀರ್ಷಿಕೆಯೇ ನಮ್ಮ ದೇಶದ ಅನಿಷ್ಠಗಳು ತಲುಪಿದ ಸ್ಥಿತಿಯನ್ನು ಸೂಚಿಸುತ್ತದೆ.
ನಮ್ಮ ಸಂಸದೀಯ ಪ್ರಜಾಪ್ರಭುತ್ವ ಎಂಥ ಸ್ಥಿತಿಗೆ ತಲುಪಿದೆಯೆಂಬುದನ್ನು ಲೇಖಕರ ಈ ಮಾತುಗಳು ಸೂಚಿಸುತ್ತದೆ. ‘ಕಪ್ಪುi ಪ್ರಭುತ್ವದಲಿ ಕುರುಡ ಪ್ರಜೆ, ಕುಂಟ ಪ್ರಭುತ್ವದ ಪ್ರಹಸನ’ ಎಂಬ ಲೇಖನದಲ್ಲಿ ಪ್ರಜಾತಂತ್ರವು ತಲುಪುತ್ತಿರುವ ದುಸ್ಥಿತಿ, ಜನಪ್ರಭುತ್ವವು ‘ಕಾರ್ಪೊರೇಟ್ ಪ್ರಜಾತಂತ್ರ’ವಾಗುತ್ತಿರುವ ಸ್ಥಿತ್ಯಂತರವನ್ನು ಸೂಚಿಸಿದ್ದಾರೆ. ಆಹಾರ ಭದ್ರತೆಯನ್ನು ಕುರಿತು ಬರೆದಿರುವ ಲೇಖನದಲ್ಲಿ ಆಹಾರ ಮತ್ತು ಪ್ರಕೃತಿ ನಡೆಯ ಸಂಬಂಧವನ್ನು ಸೋದಾಹರಣವಾಗಿ ಮಂಡಿಸುತ್ತಾರೆ.
ಶಿಕ್ಷಣದ ವ್ಯವಸ್ಥೆ ಬೋಧನಾ ಮಾಧ್ಯಮದ ಸಮಸ್ಯೆ ಉನ್ನತ ಶಿಕ್ಷಣದ ಸ್ಥಿತಿಗತಿ ಕುರಿತಂತೆ ಪ್ರತ್ಯೇಕ ಲೇಖನಗಳಲ್ಲಿ ಚರ್ಚಿಸಿದ್ದಾರೆ. ದೇಶದ ಆರ್ಥಿಕ ವಿದ್ಯಮಾನಗಳನ್ನು ಕೂಡ ಅಧ್ಯಯನಶೀಲತೆಯೊಂದಿಗೆ ಕಟ್ಟಿಕೊಡುವ ಪ್ರಜ್ಞಾವಂತಿಕೆಯಿರುವುದು ಇಲ್ಲಿಯ ಲೇಖನಗಳ ವಿಶೇಷತೆ. ತಾವು ಪ್ರತಿಪಾದಿಸುವ ನಿಲುವಿಗೆ ಪೂರಕವಾಗಿ ಅಂಕಿ ಅಂಶಗಳನ್ನು ಆಧಾರವಾಗಿ ಕೊಡುತ್ತಾರೆ, ಪೂರಕ ವಿವರಗಳನ್ನು ಒದಗಿಸುತ್ತಾರೆ. ಎಲ್ಲಾ ಲೇಖನಗಳನ್ನು ಜನಕೇಂದ್ರಿತ ಸಮಾನತೆಯ ಆಶಯಗಳನ್ನು ಅಭಿವ್ಯಕ್ತಿಸುತ್ತಾರೆ.
©2024 Book Brahma Private Limited.