ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ದಿವಂಗತ ಶಾಂತಿನಾಥ ದೇಸಾಯಿ ಅವರ ಸಾಹಿತ್ಯ ವ್ಯಕ್ತಿತ್ವವನ್ನು ಕುರಿತಾಗಿದ್ದು, ನಾಡಿನ ಹೆಸರಾಂತ ಸಾಹಿತಿಗಳು ಈ ಕೃತಿಗೆ ತಮ್ಮ ಲೇಖನಗಳ ಕೊಡುಗೆ ನೀಡಿದ್ದಾರೆ. ಚಿಂತಕ ವಿಮರ್ಶಕ ಬಸವರಾಜ ಕಲ್ಗುಡಿ ಅವರ ಮುನ್ನುಡಿ, ಕವಿ, ಸಾಹಿತಿ ಜಯಂತ ಕಾಯ್ಕಿಣಿ ಯವರ ಬೆನ್ನುಡಿ ಇದೆ. ದೇಸಾಯಿಯವರು ಪ್ರಥಮ ಕುಲಪತಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಈ ಕೃತಿಯನ್ನು ಪ್ರಕಟಿಸಿದೆ. ಸಂಬಂಧ ಎನ್ನುವುದು ಸಾಮಾಜಿಕತೆಯ ಅತಿ ಗರಿಷ್ಟ ಮತ್ತು ಮುಖ್ಯ ಸ್ವರೂಪ ಎಂದು ನಂಬಿದ ಕನ್ನಡದ ಮಹತ್ವದ ಕಥನಕಾರರಾದ ಶಾಂತಿನಾಥ ದೇಸಾಯಿ ಯವರ ಸಾಹಿತ್ಯ-ವ್ಯಕ್ತಿತ್ವ ದ ಕುರಿತಾದ ಈ ಕೃತಿಯು ರೇಚಲ್ ಕುರಿಯನ್ ಬಾರಿ, ಸುಧಾ, ನೆಲ್ಲಿಕಟ್ಟೆ ಎಸ್. ಸಿದ್ದೇಶ್ ರವರ ಸಂಪಾದಕತ್ವದಲ್ಲಿ, ಕೆ.ಸತ್ಯನಾರಾಯಣ, ಬಿ.ವಿ ರಾಮಪ್ರಸಾದ್ ಅವರ ಸಹಸಂಪಾದಕತ್ವದಲ್ಲಿ ರಚಿತಗೊಂಡಿದೆ. ಸಹಜ ಜೀವನ್ಮುಖಿ ಸ್ವಭಾವಕ್ಕೆ ವ್ಯತಿರಿಕ್ತವಾದ ವರ್ತನೆಗಳು ಹೇರಲ್ಪಟ್ಟಾಗೆಲ್ಲ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಹೀಗಾಗಿ ಈ ಸ್ವರೂಪಗಳಲ್ಲೇ ಸಮಾಜದ ಸ್ವಾಸ್ಥ್ಯದ ಸುಳಿವುಗಳನ್ನು ಶಾಂತಿನಾಥ ದೇಸಾಯಿ ಅನ್ವೇಷಿಸಿದರು. ಗಂಡು ಹೆಣ್ಣಿನ ಸಂಬಂಧಗಳ ವಿವಿಧ ಛಾಯೆಗಳನ್ನೇ ತನ್ನ ಜಿಜ್ಞಾಸೆಯ ಕೇಂದ್ರವಾಗಿಸಿಕೊಂಡು, ಬಾಳುವೆಯುದ್ಧಕ್ಕೂ ಅದನ್ನು ಸೂಕ್ಷ್ಮವಾಗಿ ಒರೆಗೆ ಹಚ್ಚುತ್ತಲೇ ಬಂದ ಅಂಥ ಸಾಹಿತಿ ಬೇರೆ ಇಲ್ಲ. ಜೀವನಶೈಲಿ ಮಾತ್ರ ಆಧುನಿಕವಾಗಿ, ಮನೋಧರ್ಮ ಗೊಡ್ಡಾಗಿಯೇ ಉಳಿಯುವ ವಿರೋಧಾಭಾಸಗಳನ್ನು ಪರಿಕಿಸಿದ ಅವರು ಸ್ವತಂತ್ರ ಮಹಿಳೆಯ ಒಂದು ಹೊಸ ಒಕ್ಕಣೆಯನ್ನು ಕನ್ನಡ ಸಂವೇದನೆಗೆ ನೀಡಿದರು. ಕೇವಲ ‘ಚಿಂತನೆ’ ಯಿಂದ, ‘ಆಸಕ್ತಿ’ ಯಿಂದ ಆಧುನಿಕವಾಗದೆ, ತಮ್ಮ ‘ವರ್ತನೆ’ ಯಿಂದ, ಅನುಷ್ಠಾನಕ್ಕಿಳಿದ ಜೀವನ ದೃಷ್ಟಿಯಿಂದ ಆಧುನಿಕವಾಗುವ ಆವರಣವನ್ನು ಸೃಷ್ಟಿಸಿದರು. ಇಂಥ ಮಹತ್ವದ ಸಾಹಿತಿಯ ಸಾಹಿತ್ಯಿಕ ಜೀವನವು ಇಲ್ಲಿ ವಿಶ್ಲೇಷಿತವಾಗಿದೆ. ಈ ದೃಷ್ಟಿ ಯಿಂದ ಇದೊಂದು ಮಹತ್ವದ ಕೃತಿ ಯಾಗಿದೆ.
©2024 Book Brahma Private Limited.