‘ಧ್ರುವತಾರೆಗಳು’ ಕೃತಿಯು ಜೆ.ಎನ್. ಜಗನ್ನಾಥ್ ಅವರ ಕವಿ, ಕೃತಿ ಪರಿಚಯ ಕುರಿತಾದ ಪುಸ್ತಕವಾಗಿದೆ. ಈ ಕೃತಿಯು ಕವಿತೆಯ ಹುಟ್ಟು ಮತ್ತು ಮನೆತನ ವಂಶದ ಬಗ್ಗೆ ವಿವರಣೆ ಕೊಡುತ್ತಾ ಎಲ್ಲವನ್ನೂ ಮೂಲದಿಂದ ಹುಡುಕುವ ಕವಿಯ ಸ್ವಭಾವವನ್ನು ಎಳೆ, ಎಳೆಯಾಗಿ ಬಿಚ್ಚಿಡುವ ರೀತಿ ಓದುಗರನ್ನು ಆ ಎಳೆಯಲ್ಲಿ ಬಂಧಿಯಾಗಿಸುತ್ತಾ ಹೋಗುತ್ತದೆ. ಆ ಹುಡುಕಾಟ ಕುಲದ ಮೂಲ ಸ್ಥಾನವಾದ ಗೋವಾದಿಂದ ಪ್ರಾರಂಭವಾಗುತ್ತದೆ. ಲೇಖಕರು ಆ ಹುಡುಕಾಟದ ಜಾಡನ್ನು ಹಿಡಿದುಕೊಂಡು ಹೋಗಿ, ರಾಷ್ಟ್ರ ಕವಿಗಳು ಮಾಡಿದ ಸಂಶೋಧನೆಯ ಜಾಡನ್ನು ವಿವರಗಳನ್ನು ಬಿಚ್ಚಿಡುತ್ತಾರೆ. ಪೋರ್ಚುಗೀಸ್ ಭಾಷೆಯಿಂದ ಹಿಡಿದು ಬೌದ್ಧ ಸನ್ಯಾಸಿಯಿಂದ ಪಾಲಿ ಭಾಷೆ ಕಲಿತಿರುವ ಬಗ್ಗೆ ತೆರೆದಿಡುವ ರೀತಿ ಅನನ್ಯ. ಕ್ರಿಯಾಶೀಲ ಮನಸ್ಸು ಹೊಸತನ್ನು ಪ್ರಯೋಗ ಮಾಡಿ ಅಪ್ಪಿಕೊಳ್ಳುವ ಮನೋಧರ್ಮವನ್ನು ಪ್ರಾಸರಹಿತ ಹೊಸಬಗೆಯ ಕಾವ್ಯ ಬರೆಯುವ ಮಾರ್ಗ ಪ್ರಾರಂಭ ಮಾಡಿರುವ ಬಗ್ಗೆ ಹೇಳಿದರೆ, ನಾಟಕದಲ್ಲಿ ಗೊಂದಲದವರ ಅಳವಡಿಕೆ, ಸರಳ ರಗಳೆಯಲ್ಲಿ ಮಹಾಕಾವ್ಯ ರಚನೆಯ, ವಿಷಯ ಬಿಚ್ಚಿಡುತ್ತಾರೆ. ಇನ್ನೂ ಓದಿನ ಉದ್ದಗಲ ತಿಳಿಯಬೇಕಾದರೆ ಅವರು ಬರೆದಿರುವ ಕೃತಿಗಳ ಹೆಸರನ್ನು ತಿಳಿದರೆ ಸಾಕು. ಅವರ ಕೃತಿಗಳ ಹೆಸರನ್ನು ತಿಳಿಸುತ್ತಾ, ಅವರ ಮಧ್ಯದಲ್ಲಿ ನಿಂತ ವಿದ್ಯಾಭ್ಯಾಸ, ಸಂಸಾರದ ಜೀವನ, ಅನುಭವಿಸಿದ ನೋವು, ಸೋದರರ ಸಹಕಾರ ಮತ್ತು ಎಲ್ಲದರ ನಡುವೆಯೂ ಇಂಗದ ಸಂಶೋಧನೆಯ ದಾಹ ಅನಾವರಣ ಮಾಡುವುದರಲ್ಲಿ ಲೇಖಕರು ಸಫಲರಾಗಿದ್ದಾರೆ. ಒಂದು ಕಡೆ ಪ್ರಶಸ್ತಿ, ಗೌರವದಿಂದ ದೂರ ಸರಿದರೂ ರಾಷ್ಟ್ರ ಕವಿ ಪ್ರಶಸ್ತಿಯ ಗರಿ ಈ ಸಾಧಕರನ್ನು ಹುಡುಕಿಕೊಂಡು ಬಂದಿರುವ ಪರಿ, ಯುದ್ಧಗಳಲ್ಲಿ ನಡೆಯುವ ಸಾವು-ನೋವು ತಲ್ಲಣಗೊಂಡಿರುವ ಮನಸ್ಸನ್ನು “ಜಗವೆಲ್ಲ ತನಗೆ ತನಗೆಂಬ ಮನುಜಾ, ಸಾಯೋ ಸಾಯಿ “ ಸಾಲುಗಳಲ್ಲಿ ತೆರೆದಿಟ್ಟಿದ್ದಾರೆ.
©2024 Book Brahma Private Limited.