ಅಂಕುರ (ಅಗ್ರಗಾಮಿ ಮಹಿಳೆಯರ ಹೆಜ್ಜೆ ಗುರುತು) -ಲೇಖಕಿ ಗೀತಾ ಶೇಣೈ ಅವರು ಬರೆದ ಸಾಧಕಿಯರ ವ್ಯಕ್ತಿ ಚಿತ್ರಣದ ಕೃತಿ ಇದು. ಭಾರತದಲ್ಲಿ ವಸಾಹತು ಆಡಳಿತವಿದ್ದ ಸಂದರ್ಭದಲ್ಲಿ ದೇಶದಾದ್ಯಂತ ನಡೆದ ವಿವಿಧ ಸ್ವರೂಪದ ಚಳವಳಿಗಳು, ಹೋರಾಟಗಳು ಹಾಗೂ ಸಮಾಜಸುಧಾರಣಾ ಕಾರ್ಯಗತಿಗಳು ಮಹಿಳೆಯರನ್ನೂ ಮುನ್ನೆಲೆಗೆ ಕರೆತಂದು ನಿಲ್ಲಿಸುವುದರಲ್ಲಿ ಯಶಸ್ವಿಯಾಗಿವೆ. ಅದುವರೆಗೆ ತಟಸ್ಥ ಭಾವದಿಂದಲೋ, ಅವಕಾಶ ವಂಚಿತೆಯರಾಗಿಯೋ ಗೃಹಕ್ಕೆ ಸೀಮಿತರಾಗಿ ಉಳಿದಿದ್ದ ಗ್ರಾಮೀಣ ಪ್ರದೇಶದ ಹಾಗೂ ನಗರವಾಸಿ ಮಹಿಳೆಯರು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಪ್ರವೇಶ ಪಡೆದು ತಮ್ಮ ಕಾರ್ಯದಕ್ಷತೆಯನ್ನು ತೋರಿದ್ದಾರೆ.
ಸ್ವಾತಂತ್ಯಪೂರ್ವ ಕಾಲದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳ ಮುಂಚೂಣಿಯಲ್ಲಿ ಗುರುತಿಸಿಕೊಂಡ ಕೆಲವು ಮಹಿಳೆಯರು ಮುಖಂಡತ್ವದ ಸ್ಥಾನಗ್ರಹಣ ಮಾಡಿ ನಡೆಸಿದ ಸ್ತ್ರೀಪರ ಅಂಕುರಪ್ರಾಯ ಕಾರ್ಯಗಳು ಅವರಿಗೆ ಅಗ್ರಗಾಮಿ ಪಟ್ಟವನ್ನು ನೀಡಿವೆ. ಇಂತಹ ಅಪೂರ್ವ ಸಾಧನೆಯನ್ನು ದಾಖಲಿಸಿರುವ 22 ಧೀರೋದಾತ್ತ ಮಹಿಳೆಯರ ವ್ಯಕ್ತಿಚಿತ್ರವನ್ನು ಈ ಗ್ರಂಥದಲ್ಲಿ ನೀಡಲಾಗಿದೆ.
ಇವರಲ್ಲಿ ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ ‘ಸಾವಿತ್ರಿದೇವಿ ಫುಲೆ’, ಪ್ರಥಮ ಮಹಿಳಾವಾದಿ ಸಾಹಿತ್ಯ ವಿಮರ್ಶಕಿ ‘ತಾರಾಬಾಯಿ ಶಿಂಧೆ’, ಕ್ರಾಂತಿಯ ಕಹಳೆಯೂದಿದ ರಾಷ್ಟ್ರವಾದಿ ‘ಮೇಡಮ್ ಭಿಕಾಜಿ ಕಾಮಾ’, ದಾದಿವೃತ್ತಿಗೆ ಚಾಲನೆಯನ್ನು ನೀಡಿದ ‘ರಮಾಬಾಯಿ ರಾನಡೆ’, ಕಾರ್ಮಿಕ ಸಂಘಟನೆಯ ಸ್ಥಾಪಕಿ ‘ಅನಸೂಯಾ ಬೆನ್ ಸಾರಾಭಾಯಿ’ ಮೊದಲಾದವರ ವಿವರಗಳು ಇವೆ. ಮಹಿಳಾ ಅಧ್ಯಯನಕ್ಕೆ ಹಾಗೂ ಮಹಿಳಾ ಚರಿತ್ರೆಯನ್ನು ಕಟ್ಟುವ ಪ್ರಯತ್ನಕ್ಕೆ ಈ ಗ್ರಂಥವು ಉತ್ತಮ ಆಕರವಾಗಿದೆ.
©2024 Book Brahma Private Limited.