‘ಡೋಣಿ ಸಾಲು’ ಬಸವರಾಜ ಡೋಣೂರರ ಸಂಕಥನವಾಗಿದ್ದು, ಕೃತಿಯನ್ನು ಪ್ರೊ. ತೇಜಸ್ವಿ ಕಟ್ಟೀಮನಿ, ಪ್ರೊ. ಗಣೇಶ್ ಪವಾರ, ಡಾ.ಟಿ.ಡಿ ರಾಜಣ್ಣ ತಗ್ಗಿ, ಡಾ. ಅಪ್ಪಗೆರೆ ಸೋಮಶೇಖರ ಅವರು ಸಂಪಾದಿಸಿದ್ದಾರೆ. ಈ ಅಭಿನಂದನಾ ಗ್ರಂಥದಲ್ಲಿ ಒಟ್ಟು ನಾಲ್ಕು ಭಾಗಗಳಿದ್ದು ಅವುಗಳನ್ನು 'ಕನ್ನಡ ನಾಟಕ ಕುರಿತ ಲೇಖನಗಳು', 'ಡೋಣೂರರ ಕೃತಿಗಳ ಅವಲೋಕನ', 'ಡೋಣೂರರ ವ್ಯಕ್ತಿತ್ವ ಕುರಿತ ಬರಹ' ಮತ್ತು 'ಡೋಣೂರರ ಆತ್ಮಕತೆ' ಎಂಬುದಾಗಿ ವಿಂಗಡಿಸಿಕೊಳ್ಳಲಾಗಿದೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದುಕೊಂಡು, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿರುವ, ನಾಡಿನ ತುಂಬಾ ಆತ್ಮೀಯ ಸ್ನೇಹಬಳಗವನ್ನು ಹೊಂದಿರುವ ಬಸವರಾಜ ಡೋಣೂರರಿಗೆ 50 ವಸಂತಗಳು ತುಂಬಿದ ಹಿನ್ನೆಲೆಯಲ್ಲಿ ಒಡನಾಡಿಗಳ ಪ್ರೀತಿಯ ಕಾಣಿಕೆಯಾಗಿ ಅಭಿನಂದನಾ ಕೃತಿಯೊಂದನ್ನು ಅರ್ಪಿಸಬೇಕೆಂಬ ಅವರ ಹಿತೈಷಿ ಬಳಗ ಮತ್ತು ವಿದ್ಯಾರ್ಥಿ ಬಳಗದ ಸದುದ್ದೇಶದಿಂದಾಗಿ ಪ್ರಸ್ತುತ 'ಡೋಣಿ ಸಾಲು' ಕೃತಿ ಸಾಕಾರಗೊಂಡಿದೆ. ಅಭಿನಂದನಾ ಗ್ರಂಥವೆಂದರೆ, ಕೇವಲ ವ್ಯಕ್ತಿಯ ಗುಣಗಾನ ಮಾಡುವ ಕೃತಿ ಎಂಬ ಸಾಂಪ್ರದಾಯಕ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಮೊದಲನೆ ಭಾಗ: ಆಧುನಿಕ ಕನ್ನಡ ನಾಟಕಕಾರರು ಎನ್ನುವ ಶೀರ್ಷಿಕೆಯಡಿ ರೂಪುಗೊಂಡಿದ್ದು, ಇಲ್ಲಿ ಈ ಡೋಣೂರರಿಗೆ ಪ್ರಿಯವಾದ ಕನ್ನಡ ನಾಟಕ ಸಾಹಿತ್ಯ ಕುರಿತ ಕನ್ನಡದ ಪ್ರಮುಖ ನಾಟಕಗಳ ವಿಮರ್ಶಾ ಬರಹಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಎರಡನೇ ಭಾಗ ಡೋಣೂರರ ಬರಹದ ಅವಲೋಕನವಾಗಿದ್ದು ಡೋಣೂರರ ಒಟ್ಟು ಕೃತಿಗಳನ್ನು ವಿಮರ್ಶಾತ್ಮಕ ಚರ್ಚೆಗೆ ಒಳಪಡಿಸುವುದು ಇಲ್ಲಿನ ಉದ್ದೇಶವಾಗಿದೆ. ಮೂರನೇ ಭಾಗ- ಡೋಣೂರರ ವ್ಯಕ್ತಿತ್ವದ ಅವಲೋಕನವಾಗಿದ್ದು; ಡೋಣೂರರ ವ್ಯಕ್ತಿತ್ವವನ್ನು ಕುರಿತು, ಹಲವು ವರ್ಷಗಳಿಂದ ಇವರನ್ನು ಹತ್ತಿರದಿಂದ ಬಲ್ಲಂಥ ಒಡನಾಡಿಗಳು ಬರೆದ ಲೇಖನಗಳು ಇಲ್ಲಿವೆ. ನಾಲ್ಕನೆಯ ಭಾಗ - ಆತ್ಮಕಥನ: ಡೋಣೂರರ ಆತ್ಮಕಥನದ ಆಯ್ದ ಭಾಗವನ್ನು ಇದು ಒಳಗೊಂಡಿದೆ.
©2025 Book Brahma Private Limited.