`ಕಡಕೋಳ ಮಡಿವಾಳಪ್ಪ’ ಎಂ.ಎಸ್ ಲಠ್ಠೆ ಅವರು ಬರೆದಿರುವ ವ್ಯಕ್ತಿಚಿತ್ರಣ ಕೃತಿಯಾಗಿದೆ. ಇಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಮಾಜದಲ್ಲಿ ಸಮಾನತೆ, ಸಾಮರಸ್ಯಗಳು ನೆಲೆಯೂರಬೇಕೆಂಬ ಆಶಯಕ್ಕೆ ಒಂದು ಇತಿಹಾಸವಿದೆ. ವಿವಿಧ ಕಾಲಘಟ್ಟಗಳಲ್ಲಿ ಬದುಕನ್ನು ಅಂತಃ ಕರಣಪೂರ್ವಕವಾಗಿ ಪ್ರೀತಿಸಿದ ಚೇತನಗಳು, ಆರೋಗ್ಯಕರ ಚಲನಶೀಲತೆಗೆ ಒತ್ತಾಸೆಯಾಗಿವೆ. ಇದು ಹೊಸ ಬೆಳಕನ್ನು ಹುಡುಕುವ ಒಂದು ಹೋರಾಟ; ಅಂತೆಯೇ ಇರುವ ಬೆಳಕನ್ನು ಕಾಯ್ದುಕೊಳ್ಳುವ ವಿಶಿಷ್ಟ ಕಾಳಜಿ, ಅದೇ ಸಂದರ್ಭದಲ್ಲಿ ಹಗಲಲ್ಲೇ ಕತ್ತಲು ಮೂಡಿಸುವ ಕರಾಳ ಪ್ರಯತ್ನಗಳಿಗೇನೂ ಕಡಿಮೆಯಿಲ್ಲ. ಬೆಳಕಿನ ಕಿರಣಗಳನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕುವ ಇಂಥ ಸ್ವಾರ್ಥ ಶಕ್ತಿಗಳಿಗೂ ಚಲನಶೀಲ ಪರವಾದ ಚೇತನಗಳಿಗೂ ಮುಖಾಮುಖಿ ಅನಿವಾರ್ಯ. ವ್ಯಕ್ತಿ ಮತ್ತು ಸಂದರ್ಭಗಳಿಗನುಗುಣವಾಗಿ ಮುಖಾಮುಖಿಯ ಸ್ವರೂಪದಲ್ಲಿ ವ್ಯತ್ಯಾಸಗಳಿರಬಹುದು; ಕಾರ್ಯಕ್ಷೇತ್ರಗಳಲ್ಲಿ ವಿಭಿನ್ನತೆಯಿರ ಬಹುದು. ಆದರೆ ಆಯಾ ನೆಲೆಯಲ್ಲಿ ಜಡತೆಯನ್ನು ಮೀರುವ ಮನೋಧರ್ಮ ಮುಖ್ಯವಾಗುವ ಮುಖಾಮುಖಿಯು ಮಹತ್ವದ್ದೇ ಆಗಿರುತ್ತದೆ. ಸಾಮಾಜಿಕ ಸನ್ನಿವೇಶವೊಂದು ಉಂಟುಮಾಡುವ ಸೈದ್ಧಾಂತಿಕ ಮುಖಾಮುಖಿ ಮತ್ತು ಅದರ ಫಲಿತಗಳು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ. ಇದಕ್ಕೂ ಒಂದು ಚರಿತ್ರೆಯಿರುತ್ತದೆ. ಆದ್ದರಿಂದ ಚಾರಿತ್ರಿಕತೆಯನ್ನು ಪರಿಗಣಿಸಿಯೇ ನಾವು ಸಾಮಾಜಿಕ ಚಿಂತನೆಯನ್ನು ಪರಿಶೀಲಿಸುವುದು ಆರೋಗ್ಯಕರವಾದುದು.
©2024 Book Brahma Private Limited.