`ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ’ ಕೃತಿಯ ಮೂಲ ಲೇಖಕರು ನರೇಂದ್ರ ಪಾಠಕ್. ಕನ್ನಡಕ್ಕೆ ಅನುವಾದಿಸಿದವರು ಹಸನ್ ನಯೀಂ ಸುರಕೋಡ. ಕೃತಿಯ ಕುರಿತು ಚಂಪಾ ಲಿಮಯೆ ಹೀಗೆ ಹೇಳುತ್ತಾರೆ: ಡಾ. ನರೇಂದ್ರ ಪಾಠಕ್ ಬರೆದಿರುವ 'ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ' ಒಂದು ಅಧ್ಯಯನಪೂರ್ಣ ಕೃತಿಯಾಗಿದೆ. ನರೇಂದ್ರ ಅವರು ಕರ್ಪೂರಿಜಿಯವರ ಸಮಗ್ರ ರಾಜಕೀಯ ಜೀವನದ ಅವಲೋಕನ ಮಾಡಿ ಅವರ ಕ್ರಿಯಾಶೀಲ ಹಾಗೂ ಕರ್ತವ್ಯನಿಷ್ಠ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ಅವರ ಕುರಿತು ಆಳವಾದ ಅಧ್ಯಯನ ಮಾಡಿ ಸಾಕಷ್ಟು ವಿವರಗಳೊಂದಿಗೆ ತಮ್ಮ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದಾರೆ. ಸ್ವಾತಂತ್ರ್ಯ ಆಂದೋಲನ ಹಾಗೂ ಸಮಾಜವಾದಿ ಆಂದೋಲನಕ್ಕೆ ಕರ್ಪೂರಿ ಠಾಕೂರ್ ನೀಡಿದ ಕೊಡುಗೆ ತುಂಬ ಮಹತ್ವದ್ದಾಗಿದೆ. ಡಾ. ಲೋಹಿಯಾ ಅವರ ನೀತಿಗಳನ್ನು ಅವರು ಅಂಗೀಕರಿಸಿದರು. ತಮ್ಮ ಆಡಳಿತಾವಧಿಯಲ್ಲಿ ಅವುಗಳನ್ನು ಜಾರಿ ಕೂಡ ಮಾಡಿದರು. ಹಿಂದುಳಿದ ಜಾತಿಗಳ ಬಗ್ಗೆ ಅವರಿಗೆ ಹೆಚ್ಚಿನ ಮಮಕಾರವಿತ್ತು. ಬಿಹಾರದ ಬಡಜನತೆಯ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಸಮಾಜವಾದಿ ಆಂದೋಲನದಲ್ಲಿ ಅವರು ತಮ್ಮ ಜೀವನದುದ್ದಕ್ಕೂ ನಿರ್ವಹಿಸಿದ ಪಾತ್ರ ಹಾಗೂ ರಾಜಕೀಯದಲ್ಲಿ ಆದರ್ಶಗಳ ಬಗೆಗಿನ ಅವರ ಬದ್ಧತೆ- ಇವುಗಳನ್ನು ನರೇಂದ್ರ ಪಾಠಕ್ ತುಂಬ ಚಾಕಚಕ್ಯತೆಯಿಂದ ನಿರೂಪಿಸಿದ್ದಾರೆ. ಅವರ ಈ ಕೃತಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ಅವರ ಯಶಸ್ಸಿಗಾಗಿ ಹಾರೈಸುತ್ತೇನೆ ಎಂದಿದ್ದಾರೆ.
ಈ ಕೃತಿಯ ಮೊದಲ ಮುದ್ರಣವು 2009ರಲ್ಲಿ ಹಾಗೂ 2024 ರಲ್ಲಿ ಎರಡನೇ ಮುದ್ರಣವಾಗಿದೆ.
©2025 Book Brahma Private Limited.