‘1971 ರ ಬೆಂಗಳೂರು ಬರಹಗಾರರು’ ಕೃತಿಯು ಪುಸ್ತಕಮನೆ ಹರಿಹರಪ್ರಿಯ ಅವರು ಬರೆದಿರುವ ಲೇಖಕರ ಕುರಿತ ಬರವಣಿಗೆಯಾಗಿದೆ. ಕೃತಿಯ ಕುರಿತು ಕೆ.ವಿ.ನಾರಾಯಣ ಅವರು, ಇದು ಐವತ್ತು ವರುಷಗಳ ಹಿಂದೆ ಸಿದ್ಧಗೊಂಡ ಮಾಹಿತಿ ಕೋಶ. ಆಗ ಹರಿಹರಪ್ರಿಯರಿಗೆ ಹದಿಹರೆಯ. ದಿಟವಾಗಿ ಆಗಿನ್ನೂ ಆ ವಯಸ್ಸಿನವರಿಗೆ ಓಟು ಮಾಡುವ ಹಕ್ಕೂ ದೊರಕಿರಲಿಲ್ಲ. ಆ ತಾರುಣ್ಯದ ಉತ್ಸಾಹದಲ್ಲಿ ಬೆಂಗಳೂರಿನ ಬರಹಗಾರರ ಕೋಶವೊಂದನ್ನು ಸಿದ್ಧಮಾಡಿದ್ದರು. ಆಗಲೇ ಪ್ರಕಟಿಸಲು ಮುಂದಾಗಿದ್ದರೂ ಕಾರಣಾಂತರಗಳಿಂದ ಮುಂದೂಡುತ್ತ ಬಂದಂತಿದೆ. ಈಗ ಐವತ್ತು ವರುಶಗಳ ಬಳಿಕ ಅದನ್ನು ಬೆಳಕಿಗೆ ತರುತ್ತಿದ್ದಾರೆ. 1971 ರ ಬೆಂಗಳೂರು ಐವತ್ತು ವರುಶದಲ್ಲಿ ಬದಲಾಗಿದೆ. ಅಂದಿನ ಬೆಂಗಳೂರು ಈಗ ಭೌಗೋಳಿಕವಾಗಿ ಹರಡಿಕೊಂಡು ದೊಡ್ಡದಾಗಿದೆ. ಅಂದಿನ ಬೆಂಗಳೂರಿನ ಬರಹಗಾರರ ಮಾಹಿತಿಯನ್ನು ಕೂಡಿಸಲು ಆಗ ಏಕೆ ಮುಂದಾದರು ಎಂಬುದು ಈಗ ಅಪ್ರಸ್ತುತ ಪ್ರಶ್ನೆ. ಹೀಗೆ ಸಂಗ್ರಹಗೊಂಡ ಮಾಹಿತಿಯನ್ನು ಈಗ ಹೇಗೆ ನೋಡಬೇಕು ಎಂಬುದಷ್ಟೇ ಈಗ ಮುಖ್ಯ. ಈ ಕೋಶದಲ್ಲಿ ಬರಹಗಾರರು ಎಂದರೆ ಕೇವಲ ಕತೆ, ಕಾದಂಬರಿ, ನಾಟಕಗಳನ್ನು ಬರೆದವರು ಮಾತ್ರವಲ್ಲ; ವೈಚಾರಿಕ ಬರಹಗಳನ್ನು ರೂಪಿಸುತ್ತಿದ್ದವರು, ಪತ್ರಿಕೆಗಳ ಬರಹಗಾರರು, ಅನುವಾದಕರು ಹೀಗೆ ವಿಶಾಲವಾದ ಅರ್ಥದಲ್ಲಿ ಬರಹಗಾರರು ಎಂಬ ಪದವನ್ನು ಬಳಸಿ ಕೊಂಡಿದ್ದಾರೆ. ಆ ಹೊತ್ತಿಗಾಗಲೇ ಹೆಸರು ಮಾಡಿದವರ ಜತೆಯಲ್ಲಿಯೇ ಮುಂದೆ ಬೆಳೆದು ಹೆಸರು ಮಾಡಬಹುದಾದ ಕುಡಿ ಬರಹಗಾರರ ಮಾಹಿತಿಯನ್ನೂ ಕೂಡಿ ಹಾಕಿದ್ದಾರೆ. ಬಹುಮಟ್ಟಿಗೆ ಆ ಕಾಲದ ಬೆಂಗಳೂರಿನ ಕನ್ನಡ ಬರಹಗಾರರ ಮಾಹಿತಿ ಇಲ್ಲಿದೆ. ಬೇರೆ ಭಾಷೆಗಳಲ್ಲಿ ತಜ್ಞರಾಗಿದ್ದೂ ಕನ್ನಡದಲ್ಲಿ ಬರೆಯುತ್ತಿದ್ದವರೂ ಇದ್ದಾರೆ. ಇಲ್ಲಿ ನಮೂದಾದ ಬರಹಗಾರರಲ್ಲಿ ಸರಿ ಸುಮಾರು ಆರೇಳು ದಶಕಗಳ ವಯೋಮಾನದ ಅಂತರದವರಿದ್ದಾರೆ ಎನ್ನುತ್ತಾರೆ
ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...
READ MORE