‘ಸುವರ್ಣಯುಗ’ ಅನಿತಾ ಪಿ. ತಾಕೊಡೆ ಅವರ ಜೀವನ ಕತಾಸಂಕಲನವಾಗಿದೆ. ಇದಕ್ಕೆ ನಾಡೋಜ ಪ್ರೊ ಹಂಪ ನಾಗರಾಜಯ್ಯ ಅವರ ಬೆನ್ನುಡಿ ಬರಹವಿದೆ; ಭಾರತದ ಜೀವನಾಡಿಯಂತಿರುವ ಮುಂಬಯಿ ಬಹುಭಾಷಿಕರ ನಿಲ್ದಾಣ. ಸಂಖ್ಯಾಬಲ, ಸಾಂಸ್ಕೃತಿಕ ಪರಂಪರೆ, ನಿರಂತರ ಪರಿಶ್ರಮ ಮತ್ತು ಸೌಹಾರ್ದತೆಯಿಂದ ಕನ್ನಡಿಗರು ಈ ಶಹರದಲ್ಲಿ ಗೌರವ ಗಳಿಸಿದ್ದಾರೆ. ಇಂಥ ದೊಡ್ಡ ಕನ್ನಡ ಸಮುದಾಯದಲ್ಲಿ ತೌಳವರು, ಬಂಟರು, ಜಿಲ್ಲವರು, ಮೊಗವೀರರು, ಹವ್ಯಕರು ಮೊದಲಾದವರೆಲ್ಲರೂ ಕೂಡಲ ಸಂಗಮವಾಗಿದ್ದಾರೆ. ಬಿಡಿ ಬಿಡಿಯಾಗಿ ನೋಡಿದರೆ ಅವರವರು ತಮ್ಮ ತಮ್ಮ ಪ್ರತ್ಯೇಕ ಸಂಘ ಸಂಸ್ಥೆಗಳನ್ನು ರೂಪಿಸಿ ತಮ್ಮ ಆಸ್ತಿತೆಯನ್ನು ಕಾಪಾಡಿಕೊಂಡಿದ್ದಾರೆ. ಒಗ್ಗಟ್ಟಿನ ಪ್ರಶ್ನೆ ಬಂದಾಗ ಎಲ್ಲರೂ ಕನ್ನಡ ಬಾವುಟ ಹಿಡಿದು ಕನ್ನಡಿಗರಾಗಿ ನಿಲ್ಲುತ್ತಾರೆ. ಈ ಪರಿಯ ಸಮ್ಮಿಶ್ರಣ ಸೊಬಗು ಇವರೆಲ್ಲರ ಯಶಸ್ಸಿನ ಗುಟ್ಟು, ಏಕತ್ವದಲ್ಲಿ ಬಹುತ್ವವನ್ನು, ಬಹುತ್ವದಲ್ಲಿ ಏಕತ್ವವನ್ನು ಮೈಗೂಡಿಸಿಕೊಂಡಿರುವ ಇಲ್ಲಿನ ಪ್ರತಿಷ್ಠಿತ ಸಮಾಜಗಳಲ್ಲಿ ಬಿಲ್ಲವರು ಮೂರ್ಧನ್ಯರು. ಅನ್ಯಾನ್ಯ ರಾಜ್ಯಗಳಿಂದ ಬಂದು ಮುಂಬಯಿಯಲ್ಲಿ ನೆಲೆಸಿರುವ ಬಹುಭಾಷಿಕರು ಬಿಲ್ಲವರನ್ನು ಪ್ರೀತಿ ಗೌರವದಿಂದ ಕಾಣುವಂತೆ, ಈ ಸಮಾಜವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದ ಮುಂದಾಳು. ಮೇಲಾಳು ಜಯ ಸಿ. ಸುವರ್ಣ, ನಾನು ನಲ್ವತ್ತು ವರ್ಷಗಳಿಂದ ಅವರ ಸಂಘಟನ ಸಾಮರ್ಥ್ಯ, ನಾಯಕತ್ವ ಬಲ್ಲವನು. ಅವರ ಆತಿಥ್ಯದ ಸವಿಯನ್ನು ಆಸ್ವಾದಿಸಿದವನು. ಅವರು ರೂವಾರಿಯಾಗಿ ರೂಪಿಸಿದ ಸಂಸ್ಥೆಗಳ ಪ್ರಗತಿ ವೈಭವಗಳನ್ನು ಕಣ್ಣಾರೆ ಕಂಡವನು. ಶ್ರೀಮಂತರು ಅಪರೂಪವೇನಲ್ಲ; ತಮ್ಮಂತೆ ತಮ್ಮ ಸಮುದಾಯವೂ ಬೆಳೆಯಬೇಕೆಂದು ಶ್ರಮಿಸುವ ಶ್ರೀಮಂತ ಹೃದಯಗಳು ವಿರಳ, ಆ ವಿರಳದಲ್ಲಿ ಜಯ ಸುವರ್ಣರು ಮುಡಿಯ ಮಾಣಿಕ್ಯ. ಅನಿತಾ ಪಿ. ತಾಕೊಡೆಯವರು ಬಹು ಶ್ರಮ ಮತ್ತು ಶ್ರದ್ದೆಯಿಂದ ರಚಿಸಿರುವ ಈ ಕೃತಿಯಲ್ಲಿ ಜಯ ಸಿ. ಸುವರ್ಣರ ಬಹುಮುಖಿ ವ್ಯಕ್ತಿತ್ವದ ಪದರ ಪಾತಳಿಗಳನ್ನು ಅಮೂಲಾಗ್ರವಾಗಿ, ಪ್ರಭಾವಶಾಲಿಯಾಗಿ ದಾಖಲಿಸಿದ್ದಾರೆ. ಆಕೆಯ ನಿರರ್ಗಳ ನಿರೂಪಣೆಯ ಶೈಲಿ ಓದುಗರಿಗೆ ಖುಷಿ ಕೊಡುತ್ತದೆ. ಕೃತಿಗೆ 'ಸುವರ್ಣಯುಗ' ಎಂಬ ಶೀರ್ಷಿಕೆ ಔಚಿತ್ಯಪೂರ್ಣವಾಗಿದೆ ಎಂದು ನಾಡೋಜ ಪ್ರೊ ಹಂಪ ನಾಗರಾಜಯ್ಯ ಅವರು ಹೇಳೀದ್ದಾರೆ.
©2025 Book Brahma Private Limited.