‘ಎಂ.ಎಸ್. ಕೃಷ್ಣನ್’ ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರು ರಚಿಸಿರುವ ಕೃತಿ. ಒಂದು ರಾಷ್ಟ್ರದ ಆಸ್ತಿ ಎಂದರೆ ಅದು ನಿಜಕ್ಕೂ ಕೈಗಾರಿಕೆಗಳನ್ನು ಪೋಷಿಸುವ ಖನಿಜ ಸಂಪನ್ಮೂಲ. ಇದಿಲ್ಲದೇ, ನಮ್ಮ ಪ್ರಗತಿಯನ್ನು ಊಹಿಸಲೂ ಸಾಧ್ಯವಿಲ್ಲ. ಭಾರತದ ಮಟ್ಟಿಗೆ ನೂರಾರು ಖನಿಜ ಸಂಪನ್ಮೂಲಗಳಿವೆ. ಭೂಮಿಯಲ್ಲಿ ಅಡಗಿರುವ ಇಂಥ ಸಂಪನ್ಮೂಲಗಳನ್ನು ಪತ್ತೆ ಹಚ್ಚುವುದು ಭೂವಿಜ್ಞಾನಿಗಳ ಮೂಲ ಹೊಣೆ. ಭಾರತೀಯ ಭೂವೈಜ್ಞಾನಿಕ ಸರ್ವೇ ಸಂಸ್ಥೆಯಲ್ಲಿ ಬ್ರಿಟಿಷರ ನಂತರ ಮೊದಲ ನಿರ್ದೇಶಕರಾಗಿ ಹೊಣೆಯನ್ನು ಹೊತ್ತವರು ಡಾ. ಎಂ. ಎಸ್. ಕೃಷ್ಣನ್(1898-1970). ಸಂಸ್ಥೆಯನ್ನು ವಿಸ್ತರಿಸಿದ ಖ್ಯಾತಿಯೂ ಇವರದೇ.
ಭಾರತ ಸರ್ಕಾರಕ್ಕೆ ಖನಿಜ ಸಲಹೆಗಾರರಾಗಿ, ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ, ಅನಂತರ ಭಾರತ ಸರ್ಕಾರದ ನೈಸರ್ಗಿಕ ಸಂಪನ್ಮೂಲ ಮತ್ತು ವೈಜ್ಞಾನಿಕ ಸಂಶೋಧನೆಯ ಮಂತ್ರಿಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಧನಬಾದ್‍ನಲ್ಲಿರುವ ಗುಣ ಮತ್ತು ಆನ್ವಯಿಕ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾಗಿಯೂ ಕೃಷ್ಣನ್ ತಮ್ಮ ಜ್ಞಾನದ ಧಾರೆಯನ್ನು ಎರೆದಿದ್ದಾರೆ. ಆಂಧ್ರ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುವಾಗಲೇ ಭಾರತದ ಭೂಲಕ್ಷಣಗಳನ್ನು ದೀರ್ಘ ಅಧ್ಯಯನಕ್ಕೆ ಒಳಪಡಿಸಿದರು. ಕೃಷ್ಣನ್ ಅವರ ಇನ್ನೊಂದು ಬಹು ಮುಖ್ಯ ಕೊಡುಗೆ ಎಂದರೆ ಆಗಿನ ಕಾಲಘಟ್ಟದಲ್ಲಿ ಭೂವಿಜ್ಞಾನವನ್ನು ಕ್ರಮಬದ್ಧವಾಗಿ ನಿರೂಪಿಸುವ ಯಾವುದೇ ಕೃತಿಗಳಿರಲಿಲ್ಲ. ಇಡೀ ಭಾರತದ ಭೂವಿಜ್ಞಾನದ ಆಳ ಅರಿವು ಕೃಷ್ಣನ್ ಅವರಿಗಿದ್ದುದರಿಂದ ಅವರು `ಜಿಯಾಲಜಿ ಆಫ್ ಇಂಡಿಯಾ ಅಂಡ್ ಬರ್ಮ’ ಎಂಬ ಹೆಸರಿನ ಉತ್ಕೃಷ್ಟ ಗ್ರಂಥವೊಂದನ್ನು ರಚಿಸಿದರು. 70-80ರ ದಶಕದಲ್ಲಿ ಈ ಕೃತಿಯೇ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಯಿತು. ಈ ಕಿರು ಪುಸ್ತಕದಲ್ಲಿ ಅವರ ಬದುಕು-ಸಾಧನೆ ಕುರಿತು ಕಿರಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ.
©2024 Book Brahma Private Limited.