‘ಗಾಂಧಿ ಸೋತ ರಾಜಕಾರಣಿ, ಗೆದ್ದ ಮಹಾತ್ಮ’ ಚಂದ್ರಕಾಂತ ಪೋಕಳೆ ಅವರ ಕೃತಿಯಾಗಿದೆ. ಕೃತಿಯ ಕುರಿತು ಬರೆಯುತ್ತಾ 'ಗಾಂಧೀಜಿಯ ವರ್ಣನೆಯು ಹಲವು ವೈರುಧ್ಯಗಳಿಂದ ತುಂಬಿಕೊಂಡಿದೆ. ಯಾವುದೇ ವಿಷಯವನ್ನು ಕಾಲಾನುಕ್ರಮವಾಗಿ ಅವರು ಕೊನೆಯ ಕಾರ್ಯದಲ್ಲಿ ವ್ಯಕ್ತಮಾಡಿದ ಅಭಿಪ್ರಾಯವನ್ನು ಸ್ವೀಕರಿಸಬೇಕೆನ್ನುವುದು ಅವರ ಸಂದೇಶವಾಗಿತ್ತು. ಈ ದೃಷ್ಟಿಯಿಂದ ಅವರು ಸತತ ವಿಕಾಸ ಹೊಂದುವ ಮಹಾಪುರುಷರಾಗಿದ್ದರು. ಕಾಂಗ್ರೆಸ್ ಬಗೆಗೆ ಭ್ರಮನಿರಸನಗೊಂಡ ಬಳಿಕ 1946ರಲ್ಲಿ ಅವರು ತಮ್ಮ ಅಂತಿಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದರು. 'ನಾನು ನನ್ನನ್ನು ಸೌಮ್ಯವಾದಿ ಎಂದು ಭಾವಿಸುತ್ತೇನೆ. ನನ್ನ ಸೌಮ್ಯವಾದವು ಸಮಾಜವಾದದಂತಿದೆ. ಸಮಾಜವಾದದಲ್ಲಿಯ ಸಮಾನತೆಯನ್ನು ಕಂಡು ದೇವರು ಒಲಿಯುತ್ತಾನೆ.' ಗಾಂಧೀಜಿಯ ಈ ನಿಲುವು ಭಾರತದಲ್ಲಿಯ ಬಂಡವಾಳ ಹಾಗೂ ಪಾಳೇಗಾರಿಕೆಯ ಶಕ್ತಿಗೆ ಸವಾಲು ಹಾಕುವಂತಹದಾಗಿತ್ತು. ಯಾವ ಶಕ್ತಿಯ ಮೇಲೆ ಅವರು 1920ರಿಂದ ಸವಾರಿ ಮಾಡಿದ್ದರೋ, ಗಾಂಧೀ ಅಲ್ಲಿಂದ ಕೆಳಗಿಳಿಯಬಯಸಿದ್ದರು. ಆದರೆ ಗಾಂಧೀಜಿಯವರಿಗೆ ಅದರ ಸಮಾನ ಬಲದ ಸ್ವಂತದ್ದಾದ ಸಮಾಜವಾದಿ ಜನಶಕ್ತಿಯನ್ನು ನಿರ್ಮಿಸುವುದಾಗಿರಲಿಲ್ಲ. ಅದರಿಂದಾಗಿ ಗಾಂಧೀಜಿಯವರು ಒಂದು ಪೇಚಿನಲ್ಲಿ ಸಿಲುಕಿದರು. ಆ ಪೇಚೇ ಅವರ ಕೊಲೆಯ ಕಾರಣಗಳಲ್ಲಿ ಒಂದಾಗಿತ್ತು. ಸ್ವತಃ ಗಾಂಧೀಯವರಲ್ಲದೆ ಹೋದರೂ ಭಾರತದಲ್ಲಿಯ ನೆಹರೂ ಆದಿಯಾಗಿ ಕಮ್ಯುನಿಸ್ಟ್, ಸಮಾಜವಾದಿ ಮುಂತಾದ ಎಡಮುಖಂಡರು ಮತ್ತು ಡಾ. ಅಂಬೇಡ್ಕರರು ಅಸ್ಪೃಶ್ಯತೆಯ ವಿರೋಧಿಯಾದ ಧರ್ಮನಿರಪೇಕ್ಷ ಸಮಾಜವಾದಿ ಶಕ್ತಿಯನ್ನು ಅತ್ಯಂತ ಪರಿಶ್ರಮಪೂರ್ವಕ ಕಟ್ಟಿದ್ದರು. ಗಾಂಧೀಯವರು ಆಯುಷ್ಯದ ಕೊನೆಗೆ ಈ ಪ್ರಸ್ಥಾಪಿತ ಹೊಸ ಸಮಾಜಶಕ್ತಿಯ ಮೇಲೆ ಸವಾರಿ ಮಾಡುವ ಕನಸು ಕಾಣಲಾರಂಭಿಸಿದ್ದರು. ಇದೇ ಆ ಪೇಚು. ಇದು ಗಮನಕ್ಕೆ ಬಂದದ್ದೇ ತಡ ಪ್ರಸ್ತಾಪಿತ ಶಕ್ತಿ ಹಾಗೂ ಅದರ ಒಡಲಲ್ಲಿ ಜನಿಸಿದ ಹಿಂದೂ-ರಾಷ್ಟ್ರವಾದಿ ಫ್ಯಾಸಿಸ್ಟ್ ಶಕ್ತಿಗಳು ಗಾಂಧೀಯ ವಿರುದ್ಧ ಆಕ್ರಮಣಗೊಂಡವು. ಗಾಂಧೀಯ ಕೊಲೆಗೆ ದ್ರವ್ಯ ಮತ್ತು ಸಾಧನಗಳನ್ನು ನೀಡಿದವರು ಯಾರು ಮತ್ತು ಯಾವ ಕಾಂಗ್ರೆಸ್ ಹಿರಿಯ ನಾಯಕರು ಮೌನವನ್ನು ತಾಳಿದರು ಎನ್ನುವುದು ಈಗ ರಹಸ್ಯವಾಗಿ ಉಳಿಯಲಿಲ್ಲ. 30 ಜನವರಿ 1948ರಂದು ನಾಥೂರಾಮ ಗೋಡಸೆಯು ಸಹಜವಾಗಿ ಗಾಂಧೀಯ ಕೊಲೆ ಮಾಡಿ, ಗಾಂಧೀಯ ಕನಸನ್ನು ಭಗ್ನಗೊಳಿಸಿದನು. ಇದರಲ್ಲೇ ಗಾಂಧೀಯ ರಾಜಕೀಯ ಸೋಲು ಮತ್ತು ಅವರಲ್ಲಿಯ ಮಹಾತ್ಮನ ಗೆಲುವು ಅಡಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
©2025 Book Brahma Private Limited.