‘ಹೊಸಗನ್ನಡದ ಅರುಣೋದಯ’ ಕೃತಿಯು ಶ್ರೀನಿವಾಸ ಹಾವನೂರ ಅವರ ಪರಿಷ್ಕೃತ ತೃತೀಯ ಆವೃತ್ತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಹಾ. ಮಾ. ನಾಯಕ ಅವರು, ಹೊಸಗನ್ನಡದ ಅರುಣೋದಯ ಒಂದು ಅಪರೂಪದ ಆಕರ ಗ್ರಂಥ. ಶ್ರೇಷ್ಠವಾದ ಸಂಶೋಧನಾ ಗ್ರಂಥ. ಕೇವಲ ಚರಿತ್ರೆಯ ಅಂಶಗಳು ತುಂಬಿಕೊಂಡಿರದೇ ವಿಮರ್ಶೆಯೂ ಮೌಲ್ಯಮಾಪನವೂ ಈ ಬರಹದಲ್ಲಿ ಹೊಳವು ಹಾಕಿರುವುದು ಒಂದು ವಿಶೇಷ. ಅತ್ಯುತ್ತಮವಾದ ಸಾಹಿತ್ಯ ಚರಿತ್ರೆ ಮಾಡಬೇಕಾದ ಕೆಲಸವೇ ಇದು. ಕೆಲ ಸಂದರ್ಭಗಳಲ್ಲಿ , ಹಾವನೂರರು ಮೌಲಿಕವಾಗಿ ವಿಚಾರ ವಿವೇಚನೆ ಮಾಡಿದ್ದಾರೆ: ಹೊಸ ಆಧಾರಗಳನ್ನು ಕಲೆಹಾಕಿದ್ದಾರೆ. ಕ್ರೈಸ್ತ ಮಿಶನರಿಗಳ ಸಾಹಿತ್ಯದ ಇತಿಮಿತಿಗಳನ್ನೂ ಕೊಡುಗೆಗಳನ್ನೂ ಇಲ್ಲಿ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಮುದ್ರಣಾಲಯಗಳು ಆರಂಭವಾಗಿ ಬೆಳೆದುಕೊಂಡ ಬಂದ ಬಗೆಯನ್ನು ವಿವರಿಸಿರುವುದು ಈ ಗ್ರಂಥದ ಅತ್ಯುಪಯುಕ್ತವಾದ ಒಂದು ಭಾಗವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE