‘ಅವಿಖ್ಯಾತ ಸ್ವರಾಜ್ಯ ಕಲಿಗಳು’ ಕೃತಿಯು ನಾರಾಯಣ ಶೇವಿರೆ ಅವರು 75 ಜನ ದೇಶದ ಅಜ್ಞಾತ ಸ್ವಾತಂತ್ಯ್ರ ಹೋರಾಟಗಾರರ ರೋಮಾಂಚಕ ಜೀವನ ಕತೆಗಳಾಗಿವೆ. ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್ ಮೊದಲಾದವರ ಹೆಸರುಗಳೇನೋ ನಮಗೆ ಗೊತ್ತು. ಆದರೆ, ಆಂಗ್ಲರೊಡ್ಡಿದ ಜೀವದಾನದ ಆಮಿಷವನ್ನು ಕಾಲಿನಲ್ಲಿ ಒದ್ದು, ಅವರ ಆಶ್ರಯದಲ್ಲಿ ಸೆರೆವಾಸವನ್ನು ಅನುಭವಿಸುವುದಕ್ಕೆ ಹೇಸಿ, ಪ್ರಾಣಾರ್ಪಣೆ ಮಾಡಿಕೊಂಡ ಕನ್ನಡದ ಕಲಿ ಸುರಪುರದ ವೆಂಕಟಪ್ಪನಾಯಕ; ಉದಾರತೆ ಮೆರೆದು ಕೊನೆಗೆ ತನ್ನ ಬಂಧುಗಳಿಂದಲೇ ದುರಂತ ಅಂತ್ಯಕ್ಕೀಡಾದ ರಾಣಿ ಅಬ್ಬಕ್ಕ, ತಾನಷ್ಟೇ ಅಲ್ಲದೆ, ತನ್ನ ಪತ್ನಿ ಮತ್ತು ತಾಯಿಯನ್ನೂ ರಾಷ್ಟ್ರವಿಮೋಚನೆಯ ಪುಣ್ಯಕಾರ್ಯದಲ್ಲಿ ತೊಡಗಿಸಿದ ಮೈಲಾರ ಮಹದೇವ, ಸ್ವಕೀಯ ಸಂಸ್ಥಾನಗಳು ಪರಕೀಯರ ವಶವಾದಾಗ ಸೈನ್ಯ ಕಟ್ಟಿಕೊಂಡು ಸ್ವಕೀಯ ರಾಜ್ಯಸ್ಥಾಪನೆಯ ಸಾಹಸ ತೋರಿದ ಕರ್ನಾಟಕದ ನಿಜವಾದ ಹುಲಿ ಧೊಂಡಿಯ ವಾಘ, ತನ್ನ ನಾಡಿಗೊದಗಿದ ಆಂಗ್ಲಗುಲಾಮಿತನ ಮತ್ತು ಕ್ರೈಸ್ತಮತಾಂತರದ ಕುರಿತು ಹನ್ನೆರಡರ ಹರೆಯದಲ್ಲೇ ಸ್ಪಷ್ಟತೆ ಪಡೆದು ಹೋರಾಟಕ್ಕಿಳಿದ ಗಾಯಿಡಿನ್ ಲೂ, ಆಂಗ್ಲರಿಗೆ ಕಪ್ಪ ನೀಡಲೊಪ್ಪದೆ ಹೋರಾಡಿ ಸ್ವಕೀಯಹೇಡಿಗಳ ಸ್ವಾರ್ಥ ಮತ್ತು ಆಂಗ್ಲರ ವಂಚನೆಗೆ ಬಲಿಯಾಗಿ ವೀರಗತಿಯನ್ನು ಪಡೆದ ವೀರಪಾಂಡ್ಯ ಕಟ್ಟಬೊಮ್ಮನ್ – ಮೊದಲಾದ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಇತಿಹಾಸ ಪುಸ್ತಕಗಳಲ್ಲಿ ದಾಖಲಾಗದೇ ಉಳಿದಿದೆ. ಅಂಥ ಅವಿಖ್ಯಾತ ಸ್ವರಾಜ್ಯ ಕಲಿಗಳ ತ್ಯಾಗ, ಬಲಿದಾನದ ಜೀವನಗಳ ರೋಮಾಂಚಕ ವಿವರಗಳನ್ನು ಅತ್ಯಂತ ಸಶಕ್ತವಾಗಿ ಕಟ್ಟಿಕೊಡುವ ಪುಸ್ತಕವೇ ‘ಅವಿಖ್ಯಾತ ಸ್ವರಾಜ್ಯ ಕಲಿಗಳು’.
©2025 Book Brahma Private Limited.