‘ಎಚ್.ಟಿ. ಪೋತೆ’ ವಾಚಿಕೆ 20 ಕೃತಿಯು ಗವಿಸಿದ್ದಪ್ಪ ಎಚ್. ಪಾಟೀಲ ಅವರ ಸಂಪಾದಿತ ವ್ಯಕ್ತಿಚಿತ್ರಣವಾಗಿದೆ. ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; ಈ ವಾಚಿಕೆಯು ಎರಡು ಮುಖ್ಯ ಕಾರಣಗಳಿಗಾಗಿ ಮಹತ್ವದ್ದಾಗಿದೆ. ಒಂದು ಒಳಗೊಳ್ಳುವಿಕೆ, ಮತ್ತೊಂದು ಗ್ರಹಿಕೆ. ಹೊರನೋಟಕ್ಕೆ ಒಳಗೊಳ್ಳುವಿಕೆ ಮತ್ತು ಗ್ರಹಿಕೆಗಳು ಒಂದೇ ಎಂಬಂತೆ ಭಾಸವಾದರೂ ಆಳಕ್ಕಿಳಿದು ಪರಿಶೀಲಿಸಿದರೆ ಅವು ಭಿನ್ನವಾಗಿರುವುದು ಸುಸ್ಪಷ್ಟ. ಒಬ್ಬ ಬರಹಗಾರ ಒಳಗುಮಾಡಿಕೊಳ್ಳುವ ಚಿಂತನೆಗಳು ಆತನ ಗ್ರಹಿಕೆಯನ್ನು ವಿಶಿಷ್ಟವಾಗಿ ರೂಪಿಸುತ್ತವೆ. ಒಳಗು ಮಾಡಿಕೊಳ್ಳುವ ಪ್ರಕ್ರಿಯೆಗೆ ಆತನಿಗೆ ಹಲವು ಬಗೆಯ ಅಂಶಗಳು ಪ್ರಭಾವ ಬೀರಿ ಪ್ರೇರಣೆಯನ್ನು ನೀಡಿರುತ್ತವೆ. ಹೀಗಾಗಿ ಒಂದು ಸಾಹಿತ್ಯಾ ಕೃತಿಯು ಹಲವು ಭಾವನೆಗಳ ದ್ಯೋತಕವಾಗಿ ರೂಪುಗೊಳ್ಳುತ್ತದೆ. ಹೀಗೆ ರೂಪುಗೊಂಡ ಪೋತೆಯವರ ಬರವಣಿಗೆಗಳು ಈ ವಾಚಿಕೆಯಲ್ಲಿವೆ. ಇಲ್ಲಿ ಆಯ್ದುಕೊಂಡಿರುವ ಬರಹಗಳು ಅಸಂಖ್ಯಾ ವಾಕ್ಯವೃಂದಗಳ ಏಕ ಧ್ವನಿಯಂತಿವೆ. ಹಾಗಂತ ಆ ಬರಹಗಳೆಲ್ಲವೂ ಒಂದೇ ಅರ್ಥವನ್ನು ಒಂದಿವೆ ಎಂತಲ್ಲ. ಭಿನ್ನಾರ್ಥಗಳನ್ನು ಹೊರಹಾಕುವ ಧ್ವನಿ ಮಾತ್ರ ಒಂದೇ ಆಗಿದೆಯೆನ್ನುವುದು. ಸಾಹಿತ್ಯವನ್ನು ಸಾಹಿತ್ಯವನ್ನಾಗಿಯೇ ನೋಡದೆ ಅದನ್ನು ಬದುಕಿನ ಭಾಗವಾಗಿ, ಸಂಸ್ಕೃತಿಯ ಭಾಗವಾಗಿ ನೋಡುವುದರಲ್ಲಿಯೇ ಅನೇಕರ್ಥಾಗಳನ್ನು ಒಳಗೊಂಡ ಒಂದೇ ಧ್ವನಿ ಅಲ್ಲಿ ಸ್ಪುಟಗೊಂಡಿದೆ. ಇಂತಹ ಏಕ ಧ್ವನಿಯಲ್ಲಿಯೇ ಅಸಂಖ್ಯ ಸಂಕಟಗಳನ್ನು, ನೋವುಗಳನ್ನು, ಕ್ರೌರ್ಯಗಳನ್ನು, ದಬ್ಬಾಳಿಕೆಯನ್ನು, ಸಾಂಸ್ಕೃತಿಕ ರಾಜಕಾರಣದ ವಿಭಿನ್ನ ಚಹರೆಗಳನ್ನು ಹೊರಹಾಕುವ ಕ್ರಮ ಇಲ್ಲಿನ ಬರಹಗಳಲ್ಲಿದೆ. ಆ ಕಾರಣಕ್ಕಾಗಿಯೇ ಸಾಹಿತ್ಯವನ್ನು ಸಾಂಸ್ಕೃತಿಕ ಚಟುವಟಿಕೆ ಎಂದು ಬಿಂಬಿಸುವ ಪೋತೆಯವರ ಬರಹಗಳನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ. ಇವುಗಳು ಅವರ ಒಟ್ಟೂ ತಾತ್ವಿಕತೆಯ ಪ್ರಾತಿನಿಧಿಕಗಳಾಗಿವೆ ಎಂಬುವುದನ್ನು ಈ ವಾಚಿಕೆಯಲ್ಲಿ ನೋಡಬಹುದು.
©2024 Book Brahma Private Limited.