ಪ್ರಾಚೀನ ಭಾರತದ ಪ್ರಮುಖ ಜ್ಞಾನಿಗಳಲ್ಲಿ ವರಾಹಮಿಹಿರಾಚಾರ್ಯ ಕೂಡ ಒಬ್ಬರು. ವರಾಹಮಿಹಿರ ವಿಕ್ರಮಾದಿತ್ಯ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂಬ ಪ್ರತೀತಿಯೂ ಉಂಟು. ಆದರೆ ಪಂಡಿತರು ಮಾಡಿರುವ ಕಾಲನಿರ್ಣಯದ ಪ್ರಕಾರ ಈತ 5-6ನೇ ಶತಮಾನದಲ್ಲಿ ಜೀವಿಸಿದ್ದನೆಂದು ಭಾವಿಸಬಹುದು. ಜ್ಞಾನದ ಅನೇಕ ಶಾಖೆಗಳನ್ನು ಕುರಿತಂತೆ ಪ್ರಚಲಿತವಿದ್ದ ವಿಚಾರಗಳನ್ನು ಒಂದೆಡೆ ಸಂಕಲಿಸಿ, ವಿಶ್ವಕೋಶ ರಚನೆಗೆ ಕಾರಣವಾದವನು. `ಪಂಚ ಸಿದ್ಧಾಂತಿಕ’, `ಬೃಹತ್ ಸಂಹಿತೆ’ ಮತ್ತು `ಬೃಹತ್ ಜಾತಕ’ ಎಂಬ ಅಮೂಲ್ಯ ಕೃತಿಗಳನ್ನು ನೀಡಿದ್ದಾನೆ. ಭೂಮಿ ಗೋಲಾಕಾರವಿರುವುದಾಗಿ ವರಾಹಮಿಹಿರ ಸ್ಪಷ್ಟವಾಗಿ ವಿವರಿಸಿದ್ದಾನೆ. ಗ್ರಹಣ ಕುರಿತು ಅವನ ಅಭಿಪ್ರಾಯ ಸ್ಪಷ್ಟವಾಗಿದೆ. ಚಂದ್ರ ಗ್ರಹಣದಲ್ಲಿ ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸುತ್ತದೆ ಎಂದೂ, ಸೂರ್ಯನ ನೆರಳನ್ನು ಚಂದ್ರ ಪ್ರವೇಶಿಸಿದರೆ ಅದು ಸೂರ್ಯ ಗ್ರಹಣವೆಂದೂ ವೈಜ್ಞಾನಿಕವಾಗಿ ವಿವರಿಸಿದ್ದಾನೆ. ಧೂಮಕೇತುಗಳ ಬಗ್ಗೆಯೂ ಅವನು ದಾಖಲಿಸಿರುವುದು ಅತ್ಯಂತ ಕೌತುಕ. ವರಾಹಮಿಹಿರಾಚಾರ್ಯ ಭೂಕಂಪನಗಳ ಬಗ್ಗೆ, ಅದಕ್ಕಿಂತಲೂ ಹೆಚ್ಚಾಗಿ ಅಂತರ್ಜಲವನ್ನು ಎಲ್ಲೆಲ್ಲಿ ಪರಿಶೋಧಿಸಬೇಕು ಎಂಬುದರ ಬಗ್ಗೆ ಆಗ್ಗೆ ಲಭ್ಯವಿದ್ದ ಎಲ್ಲ ಮಾಹಿತಿಯನ್ನೂ ಕ್ರೋಢಿಕರಿಸಿದ್ದಾನೆ. ಈ ಸಣ್ಣ ಕೃತಿಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಪ್ರಸ್ತಾಪವಿದೆ.
©2024 Book Brahma Private Limited.