‘ನಾ ಕಂಡ ವ್ಯಕ್ತಿಗಳು’ ಸ್ಟ್ಯಾನಿ ಲೋಪಿಸ್ ಕಾರ್ಗಲ್ ಅವರು ಬರೆದಿರುವ ವ್ಯಕ್ತಿ ಚಿತ್ರಣವಾಗಿದೆ. ತನ್ನ ತಾಯಿಯನ್ನ ಮೂಲ ಸಾಮಗ್ರಿಯನ್ನಾಗಿ ಮಾಡಿಕೊಂಡ ಸ್ಟ್ಯಾನಿ ತನ್ನ ತಂದೆ ಮತ್ತು ತಾಯಿಯನ್ನ ತಮ್ಮ ಮುಂದೆ ಇರಿಸಿ ಕೊಂಡು ಸಮಾಜದ ಉಳಿದವರನ್ನ ತೂಗುತ್ತಾ ಹೋಗುತ್ತಾರೆ. ಹೀಗೆ ತೂಗುತ್ತ ನಮ್ಮ ಸಮಾಜ ಎಷ್ಟೋಂದು ಸುಂದರವಾಗಿದೆ, ಎಷ್ಟೋಂದು ಸುಭಗವಾಗಿದೆ ಎಂಬುದನ್ನ ತಿಳಿಸಿ ಕೊಡುತ್ತಾರೆ. ಇಂತಹಾ ವ್ಯಕ್ತಿಗಳ ಒಂದು ಕಿರು ಪರಿಚಯವೇ ಈ ಕೃತಿ. ಸಾಮಾನ್ಯರಲ್ಲಿ ಸಾಮಾನ್ಯರಾದ ಹಲವರನ್ನ ಆಯ್ಕೆ ಮಾಡಿಕೊಂಡು ಅವರು ನಮ್ಮ ಸಮಾಜಕ್ಕೆ ಏನನ್ನ ನೀಡಿದ್ದಾರೆ ಎಂಬುದನ್ನ ಅಷ್ಟೇ ಅರ್ಥಪೂರ್ಣವಾಗಿ ಹೇಳುವ ಒಂದು ಯತ್ನ ಇಲ್ಲಿ ಆಗಿದೆ. ಅವರು ಅಧ್ಯಾತ್ಮಿಕ ವ್ಯಕ್ತಿಯಾಗಿರಬಹುದು, ಒಂದು ಕುಟುಂಬವನ್ನ ಸಲಹುವ ಸಾಂಸಾರಿಕ ವ್ಯಕ್ತಿಯಾಗಿರಬಹುದು, ರಾಜಕೀಯದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ವ್ಯಕ್ತಿಯಾಗಿರಬಹುದು, ಶಿಕ್ಷಕ, ಸಾಹಸಿ, ಕಲಾವಿದ, ಪಾದರಿ, ಬಾಲ ಪ್ರತಿಭೆ, ಚಿತ್ರ ಕಲಾವಿದ., ಮುಳುಗು ತಜ್ಞ, ಕ್ರೀಡಾ ಪಟು ಹೀಗೆ ಯಾರೇ ಇರಬಹುದು ಅಂತಹಾ ವ್ಯಕ್ತಿಯನ್ನ ಅವರು ನಮಗೆ ಪರಿಚಯ ಮಾಡಿ ಕೊಡುತ್ತಾರೆ. ಇಂತಹಾ ವ್ಯಕ್ತಿಯನ್ನು ಕುರಿತಂತೆ ನಾಲ್ಕು ಒಳ್ಳೆಯ ಮಾತುಗಳು ಬರೆಯಲು ಸ್ಟ್ಯಾನಿ ಮರೆಯುವುದಿಲ್ಲ. ಈ ಎಲ್ಲ ಜನ ತಮ್ಮ ಸೇವೆ ಆದ ನಂತರವೋ, ಇಲ್ಲ ನಿವೃತ್ತಿಯ ನಂತರವೋ ಸಮಾಜ ಸೇವೆಗೆ ಇಳಿಯುತ್ತಾರೆ ಅನ್ನುವುದು ಮುಖ್ಯ. ಆದರೆ ಹಲವರು ತಾವು ಕೆಲಸ ಮಾಡುತಿರಬೇಕಾದರೇನೆ ಸೇವೆಗೆ ದುಮುಕಿರುತ್ತಾರೆ. ಕಾರ್ಗಲ್ಲಿನ ವೈ, ಎ, ದಂತಿ ತಮ್ಮ ಹವ್ಯಾಸ ಅನ್ನುವಂತಹಾ ಪುಸ್ತಕ ಸೇವೆಯನ್ನ ತನ್ನ ವೃತ್ತಿಯಿಂದಲೇ ಆರಂಭ ಮಾಡಿದ್ದನ್ನ ನಾವು ನೋಡುತ್ತೇವೆ. ನಿವೃತ್ತಿಯ ನಂತರ ಇದು ಅವರಿಗೆ ಒಂದು ವೃತ್ತಿಯಾಯಿತು, ಸಂತೋಷ್ ಚಿಕ್ಕಂದಿನಲ್ಲಿ ಆಕಾಶದಲ್ಲಿ ಹಾರುತಿದ್ದ ವಿಮಾನಗಳನ್ನ ನೋಡಿ ಮೈಮರೆಯುತ್ತಿದ್ದವನು ನಂತರದ ದಿನಗಳಲ್ಲಿ ಅದೇ ವಿಮಾನ ಹತ್ತಿ 26 ದೇಶಗಳನ್ನ ಸುತ್ತಿ ಬರುವಂತಾದದ್ದು ಅಚ್ಚರಿಯ ವಿಷಯವೇ, ಇಂತಹಾ ಅಪರೂಪದ ಘಟನೆಗಳಿಗೆ ಈ ಯುವಕ ಕಾರಣನಾಗುತ್ತಾನೆ. ಅಂತೆಯೇ ಭಕ್ತಿ ಸಂಗೀತದ ಧೃವತಾರೆ ಫೆಲಿಕ್ಸ್ ನರೋನ, ಪುಸ್ತಕಗಳನ್ನೇ ಭಂಡವಾಳವನ್ನಾಗಿಸಿ ಕೊಂಡ ರವೀಂದ್ರ ಪುಸ್ತಕದ ದಂತಿ, ನಾಟಕದ ಶೇಕ್ ಮೇಷ್ಟ್ರು, ಹೋರಾಟ ಬದುಕಿನ ಮೋಹನ ಮೂರ್ತೀ, ಇತ್ಯಾದಿಯಾಗಿ ನಮಗೆ ದೊರೆಯುತ್ತಾರೆ. ಕೆಲ ಲೇಖನಗಳು ಇನ್ನೂ ತುಸು ಇರಬೇಕಿತ್ತೇನೋ ಅನಿಸುತ್ತದೆ. ಅಂದರೆ ಲೇಖನ ಮತ್ತೂ ದೀರ್ಘವಾಗಿರ ಬೇಕಿತ್ತು, ಕೆಲ ಲೇಖನಗಳು ತಟ್ಟನೆ ಮುಗಿದು ಬಿಡುತ್ತವೆ. - ಡಾ. ನಾ, ಡಿಸೋಜ.
©2024 Book Brahma Private Limited.