‘ಪ್ರಭುಚನ್ನಬಸವ ಸ್ವಾಮೀಜಿ’ ವಿರಚಿತ 216 ವಿಶ್ವವಿಭೂತಿಗಳ ಜೀವನ ಕಥನ -ಮಹಾತ್ಮರ ಚರಿತಾಮೃತ. ಜೀವದಯೆ, ಮಾನವೀಯ ಅನುಕಂಪ, ಸಮಭಾವ, ಸಮದರ್ಶನಗಳು ಮಹಾತ್ಮರ ಲಕ್ಷಣಗಳು. ಅವರು ಸರ್ವರನ್ನೂ ಸಮಭಾವದಿಂದ ಕಂಡ ಸಂದರ್ಶಿಗಳು; ಹೃದಯ ವೈಶಾಲ್ಯತೆಗೆ ಹೆಸರಾದವರು; ಎಲ್ಲ ಜೀವಿಗಳಲ್ಲಿ ವಿಶ್ವಾತ್ಮ ಶಕ್ತಿಯನ್ನು ಕಂಡು ವಿಶ್ವಾತ್ಮಕತೆಯನ್ನು ಸಾರಿದವರು. ಇಂತಹ ಮಹಾತ್ಮರ ಭವ್ಯ ಮತ್ತು ದಿವ್ಯ ಚರಿತೆಯ ರಸಾನುಭೂತಿಯನ್ನು ಉಂಟು ಮಾಡುವ ಕೃತಿಯೇ ‘ಮಹಾತ್ಮರ ಚರಿತಾಮೃತ’. ಈ ಕೃತಿಯಲ್ಲಿ ಮಹಾತ್ಮರ ಚರಿತ್ರೆಗಳನ್ನು ಅಂಕಲಗಿ ಅಡಿವೆಪ್ಪನವರಿಂದ ಹೊಸಹಳ್ಳಿಯ ಬೂದೀಶ್ವರರವರೆಗೆ ಓದುಗರ ಅನುಕೂಲಕ್ಕಾಗಿ ಅಕಾರಾಧಿಯಲ್ಲಿ ಹೊಂದಿಸಲಾಗಿದೆ. ಅನುಕ್ರಮಣಿಕೆಯ ಆದ್ಯಂತದಲ್ಲಿರುವ ಈ ಮಹಾತ್ಮರೀರ್ವರೂ ತಮ್ಮ ಸಾಧನೆಯಿಂದ ಏಳುನೂರಾ ಎಪ್ಪತ್ತು ವರ್ಷ ಬದುಕಿದವರೆಂದು ವಿಶೇಷ ಮತ್ತು ಯೋಗಾಯೋಗಾ, ಉಳಿದಂತೆ ಈ ಕೃತಿಯಲ್ಲಿ ಆದಿಕವಿ ವಾಲ್ಮೀಕಿಯಿಂದ ಆಧುನಿಕ ವಿಶ್ವಪ್ರಸಿದ್ಧ ಕವಿ ರವೀಂದ್ರನಾಥರವರೆಗೆ ಅನೇಕ ಕವಿಗಳು, ಮಹಾವೀರ, ಬುದ್ಧ, ಬಸವನಂತಹ ದಾರ್ಶನಿಕರು; ಶಂಕರ, ರಾಮಾನುಜ, ಮಧ್ವರಂತಹ ಆಚಾರ್ಯರು; ಏಸು, ಮಹಮ್ಮದ ಗುರುನಾನಕರಂತಹ ಧರ್ಮಪತ್ರಕರ್ತರು, ಜ್ಞಾನೇಶ್ವರ, ತುಕಾರಾಮ, ಸೇವಾಲಾಲ, ರಾಮದಾಸರಂತಹ ಸಂತರು; ಕನಕ-ಪುರಂದರರಂತಹ ದಾಸರು; ಅಕ್ಕ, ಅಲ್ಲಮ್ಮ, ಸಿದ್ಧರಾಮದೇವರಂತಹ ಯೋಗ ಸಾಧಕರು; ರಬಿಯಾ, ಅಂಡಾಳ, ಮೀರಾ, ಲಲ್ಲೇಶ್ವರಿಯಿಂದ ಮೊದಲ್ಗೊಂಡು ಆಧುನಿಕ ಕಾಲದ ಸಾಧಕಿಯರು; ನಿಜಗುಣ, ಸರ್ಪಭೂಷಣ, ನಾಗಭೂಷಣ, ಬಾಲಲೀಲಾ ಮಹಾಂತ ಶಿವಯೋಗಿ, ಶಿಶುನಾಳ ಶರೀಫರಂತಹ ತತ್ತ್ವಪದಕಾರರು; ಖ್ವಾಜಾ ಬಂದೇನವಾಜರಂತಹ ಮಹಮ್ಮದೀಯ ಮೌಲ್ವಿಗಳು, ಎಡೆಯೂರು ಸಿದ್ದಲಿಂಗೇಶ್ವರ, ಅಥಣಿಯ ಮುರಘಯೋಗಿ, ಹಾನಗಲ್ಲ ಕುಮಾರ ಸ್ವಾಮಿಗಳಾದಿಯಾಗಿ ಇತ್ತೀಚಿನ ತೋಂಟದ ಸಿದ್ಧಲಿಂಗ ಸ್ವಾಮಿಗಳ ವರೆಗೆ ಅನೇಕ ಸ್ವಾಮಿಗಳು, ಅರವಿಂದ-ರಮಣರಂತಹ ಮಹರ್ಷಿಗಳು; ರಾಮಕೃಷ್ಣ-ವಿವೇಕಾನಂದರಂತಹ ಮಾದರಿ ಗುರು-ಶಿಷ್ಯರು; ರಾಜಾರಾಮ ಮೋಹನರಾಯ, ದಯಾನಂದ ಸರಸ್ವತಿ, ಜ್ಯೋತಿಬಾ ಫುಲೆ, ನಾರಾಯಣ ಗುರುಗಳಂತಹ ಸಮಾಜ ಸುಧಾರಕರು; ಮಹಾತ್ಮಗಾಂಧಿ -ಅಂಬೇಡ್ಕರ ಅವರಂತಹ ದೇಶಭಕ್ತರ ಚರಿತ್ರೆಗಳಿವೆ. ತತ್ತ್ವಜ್ಞಾನಿ ರಾನಡೆ, ಇಸ್ಕಾನದ ಪ್ರಭುಪಾದರು, ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಬಾಬಾ , ಸಾಯಿಬಾಬಾ ಅವರ ಚರಿತ್ರೆಗಳೂ ಇಲ್ಲಿವೆ.
©2024 Book Brahma Private Limited.