‘ರಸಋಷಿ ರಾಷ್ಟ್ರಕವಿ ಕುವೆಂಪು’ ಕೃತಿಯು ಜಿ.ಎನ್. ಉಪಾಧ್ಯ ಅವರ ಕುವೆಂಪು ಜೀವನ ಹಾಗೂ ಸಾಧನೆ ಕುರಿತ ಲೇಖನಸಂಕಲನವಾಗಿದೆ. ಲೇಖಕಿ ಉಮಾ ರಾಮರಾವ್ ಅವರು ಕೃತಿಯ ಕುರಿತು ಬರದಿರುವ ಬೆನ್ನುಡಿಯ ಸಾಲುಗಳಿವು; ಡಾ. ಜಿ. ಎನ್. ಉಪಾಧ್ಯರ 'ರಸ ಋಷಿ ರಾಷ್ಟ್ರಕವಿ ಕುವೆಂಪು' ಎನ್ನುವುದು ಕನ್ನಡ ಸಾಹಿತ್ಯದ ಮಹಾಚೇತನವೊಂದನ್ನು ಸಂಕ್ಷಿಪ್ತವಾದರೂ ಸಂಪೂರ್ಣವಾಗಿ ಪರಿಚಯಿಸುವ ಕೃತಿ. ಕುವೆಂಪು ಅವರ ಸಾಹಿತ್ಯ ಸಾಧನೆಯ ವ್ಯಾಪ್ತಿ ಅಗಾಧವಾದುದು, ಸ್ವಲ್ಪದರಲ್ಲಿ ಅದನ್ನು ಹೇಳುವುದೆಂದರೆ ಕಡಲನ್ನು ಬೊಗಸೆಯಲ್ಲಿ ಹಿಡಿವನೆನ್ನುವಂತೆ. ಆದರೆ ಡಾ ಉಪಾಧ್ಯರು ಈ ಕಠಿಣತಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಕುವೆಂಪು ಅವರ ವಿಪುಲ ಸಾಹಿತ್ಯವನ್ನು ಕಾವ್ಯ, ಕಥನ ಸಾಹಿತ್ಯ, ನಾಟಕ ಮೊದಲಾದ ಅಧ್ಯಾಯಗಳಲ್ಲಿ ವಿವರಿಸಿರುವುದೇ ಅಲ್ಲದೆ ಅವರ ಮಹಾಕಾವ್ಯವಾಗಿ ಮೂಡಿ ಬಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ 'ಶ್ರೀ ರಾಮಾಯಣ ದರ್ಶನಂ' ಕೃತಿಯ ಅತಿಶಯತೆಯನ್ನು ಬಿಂಬಿಸಲೆಂದೇ ಒಂದು ಇಡಿಯ ಆಧ್ಯಾಯವನ್ನು ಮೀಸಲಿರಿಸಿದ್ದಾರೆ. ಕುವೆಂಪು ಅವರ ಆತ್ಮಕಥನವಾದ 'ನೆನಪಿನ ದೋಣಿಯಲ್ಲಿ' ಎಂಬ ಕೃತಿಯಿಂದ ಉದ್ಭತವಾದ ಸಾಲುಗಳಿಂದ ಅವರ ಬಾಲ್ಯ,ಯೌವನ, ವಿದ್ಯಾಭ್ಯಾಸ, ವೃತ್ತಿ ಜೀವನ, ಸಾಹಿತ್ಯ ರಚನೆ ಮೊದಲಾದ ಎಲ್ಲಾ ವಿಶೇಷಗಳನ್ನೂ ಅತ್ಯಂತ ಅಧಿಕೃತತೆಯಿಂದ ಡಾ. ಉಪಾಧ್ಯರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇವೆಲ್ಲದೆ ಕರ್ನಾಟಕ ಎಂಬುದು ಬರಿಯ ಹೆಸರಲ್ಲ ಅದೊಂದು ಶಕ್ತಿ ಎನ್ನುವ ಕುವೆಂಪು ಅವರ ಅಭಿಪ್ರಾಯವನ್ನು ಅವರದೇ ಮಾತುಗಳಲ್ಲಿ ಬಿಚ್ಚಿರಿಸಿದ್ದಾರೆ.
ಅಪರೂಪದ ಭಾವಜೀವಿಯಾದ ಕುವೆಂಪು ಅವರು ಕೇವಲ ಗಗನದಲ್ಲಿ ವಿಹರಿಸುವ ಹಾಡು ಹಕ್ಕಿಯಾಗದೆ ನೆಲದ ಮೇಲೆ ದೃಢವಾಗಿ ಕಾಲೂರಿನಿಂತ ಗಟ್ಟಿ ಚಿಂತನೆಗಳಿಂದ ಕೂಡಿದವರಾಗಿದ್ದಾರೆ ಎನ್ನುವುದನ್ನು 'ಕುವೆಂಪು ಅವರ ವೈಚಾರಿಕತೆ” ಎನ್ನುವ ಅಧ್ಯಾಯದಲ್ಲಿ ಲೇಖಕರು ವಿವರವಾಗಿ ತಿಳಿಸಿದ್ದಾರೆ. ಪುಸ್ತಕದುದ್ದಕ್ಕೂ ಉಲ್ಲೇಖಿಸಲ್ಪಟ್ಟಿರುವ ಕುವೆಂಪು ಅವರ ಮಾತುಗಳು ಮತ್ತು ಅವರನ್ನು ಕುರಿತಾಗಿ ನಾಡಿನ ಇತರ ಹಿರಿಯರು ಆಡಿರುವ ಮಾತುಗಳಿಂದ ವಾಚಕರುಕುವೆಂಪು ಅವರ ವ್ಯಕ್ತಿತ್ವವನ್ನು ಕೊರೆಯಿಲ್ಲದಂತೆ ಕಟ್ಟಿಕೊಳ್ಳುವಂತೆ ಮಾಡುವುದರಲ್ಲಿ ಈ ಕೃತಿಯು ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
©2024 Book Brahma Private Limited.