ಡಿ.ಆರ್. ಬಳೂರಗಿ ಅವರ ‘ವಿದ್ಯುತ್ ಮಾಂತ್ರಿಕ’ ನಿಕೊಲಾ ಟೆಸ್ಲಾ ಅವರ ಜೀವನ ಮತ್ತು ಸಾಧನೆಯ ಕುರಿತ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಂಘರ್ಷಮಯ ಬದುಕು ಸವೆಸುತ್ತಾ ಸಾಗಿದ ನಿಕೋಲಾ ಟೆಸ್ಲಾ ನಾವಿಂದು ಮನೆ ಬಳಕೆಗೆ ಉಪಯೋಗಿಸುವ ಎಸಿ ವಿದ್ಯುತ್ತನ್ನು ವ್ಯವಸ್ಥಿತವಾಗಿ ಪರಿಚಯಿಸಿದಾತ. ಡಿಸಿ ವಿದ್ಯುತ್ತಿನ ಬಗೆಗಿನ ಹಲವು ತೊಂದರೆಗಳನ್ನು ನಿಖರವಾಗಿ ಬೆರಳೆತ್ತಿ ತೋರಿಸಿ, ಅಲ್ಲಗಳೆದು ಅದನ್ನು ತಿರಸ್ಕರಿಸಿದಾತ. ಹಲವು ಕಡೆ ವ್ಯವಹಾರಗಳಲ್ಲಿ ಮೋಸ ಹೋಗಿ, ಕೆಲವು ವಿದ್ಯುತ್ ಕಂಪನಿಗಳ ವಿರೋಧ ಕಟ್ಟಿಕೊಂಡು ಎಲ್ಲರಿಂದ ತಿರಸ್ಕರಿಸಲ್ಪಟ್ಟು ಗಳಿಸಿದ್ದೆಲ್ಲವನ್ನು ಕಳೆದುಕೊಂಡವನು ಟೆಸ್ಲಾ. ಆದರೂ ಧೃತಿಗೆಡದೆ ತನ್ನ ದಾರಿಯಲ್ಲಿ ಏಕಾಂಗಿಯಾಗಿ ಸಾಗುತ್ತಾ ವಿಶ್ವಮಾನ್ಯತೆಗಳಿಸಿಕೊಂಡವನು ಟೆಸ್ಲಾ, ಸೋತಾಗ ಕೈಬಿಟ್ಟು ಗೆದ್ದಾಗ ಕೈಹಿಡಿವ ಕೆಲವು ವಿಜ್ಞಾನಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ನಲುಗಿದರೂ ಬೆಂಬಲಿಸುವ ಕೆಲವರ ನೆರಳಲ್ಲಿ ತಂಪು ಅನುಭವಿಸಿದಾತ. ಇಂದಿಗೂ ವಿದ್ಯುತ್ ಕ್ರಾಂತಿಯಲ್ಲಿ ಜಗತ್ತಿನಲ್ಲೇ ಈತನ ಹೆಸರು ಅಜರಾಮರ, ಟೆಸ್ಥಾನ ರೋಚಕ ಜೀವನ ಚರಿತ್ರೆಯನ್ನು ಹೃದಯಂಗಮವಾಗಿ ನಿರೂಪಿಸಿದವರು ಪ್ರೊ|| ಡಿ. ಆರ್. ಬಳೂರಗಿಯವರು.
"ಸುಗ್ಗಿಯು ಬಂದಿತು ಹಿಗ್ಗನು ತಂದಿತು ನಮ್ಮಯ ನಾಡಿನ ಜನಕೆಲ್ಲ" ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯದ ಕತೃ ದ.ರಾ ಬಳೂರಗಿ (ಡಿ.ಆರ್. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು. ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ...
READ MORE