“ಕುಂ.ವೀರಭದ್ರಪ್ಪ” ವಾಚಿಕೆಯನ್ನು ಡಾ.ನಂದೀಶ್ವರ ದಂಡೆ ಅವರು ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿ ವಿಶಿಷ್ಟವಾದ ಕಥೆ, ಕಾದಂಬರಿಗಳ ಮೂಲಕ ಮನೆಮಾತಾದವರು ಕುಂ. ವೀರಭದ್ರಪ್ಪನವರು. ಇವರು ಕೇವಲ ಜನಪ್ರಿಯ ಲೇಖಕರಾಗಿ ಉಳಿಯದೆ ಸಂವೇದನಾಶೀಲ, ದಲಿತ ಬಂಡಾಯ ಮನೋವೃತ್ತಿಯ ಪ್ರಮುಖ ಬರಹಗಾರರಾಗಿ ಕನ್ನಡ ಸಾಹಿತ್ಯಲೋಕದ ಮುಂದೆ ಇದ್ದಾರೆ. ಅವರ ಕಥೆ, ಕಾದಂಬರಿಗಳು ಕನ್ನಡ ಸಾಹಿತ್ಯ ಜಗತ್ತನ್ನು ಬಹುಮಟ್ಟಿಗೆ ವಿಸ್ತರಿಸಿವೆ. ತಮ್ಮದೇ ಆದ ಒಳನೋಟಗಳು ಬದುಕಿನ ಸೂಕ್ಷ್ಮ ಚಿತ್ರಣಗಳು ಹಾಸುಹೊಕ್ಕಾಗಿದೆ. ಸಮಕಾಲೀನ ಸಮಾಜದಲ್ಲಿ ಜನರು ಬದುಕಿದ ರೀತಿ, ನೀತಿಗಳು, ನಾವು ಬದುಕುತ್ತಿರುವ ಪರಿಸರವೇ ಅವರ ಬರವಣಿಗೆಯ ಶಕ್ತಿಯಾಗಿದೆ. ಕಲ್ಪನೆಯು ವಾಸ್ತವದ ಬೆಸಿಗೆಯಾಗಿದೆ. ಮೂಲತಃ ಬಂಡಾಯ ಮನೋಭಾವದ ಲೇಖಕರಾಗಿದ್ದಾರೆ. ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ ಕುಂವೀ ಅವರು ಕಳೆದ ಐವತ್ತು ವರ್ಷಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಬೆರಗನ್ನುಂಟು ಮಾಡಿದ್ದಾರೆ. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ ಮೌಲಿಕ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಹೀಗೆ ವೀರಭದ್ರ ಅವರ ಆಯ್ದ ಕೆಲವು ಸಾಹಿತ್ಯಗಳನ್ನು ಈ ವಾಚಿಕವು ಒಳಗೊಂಡಿವೆ.
©2025 Book Brahma Private Limited.