ಓಟಾ ಬೆಂಗ ರೋಹಿತ್ ಚಕ್ರತೀರ್ಥ ಅವರ ಕೃತಿಯಾಗಿದೆ. ಇದು ಹಲವು ವ್ಯಕ್ತಿಚಿತ್ರಗಳ ಸಂಗ್ರಹ. ಕೇವಲ ಸರಕಾರದ ಅತ್ಯಾಸೆಗಾಗಿ ಆಕಾಶಕ್ಕೆ ಹಾರಲು ಸಿದ್ಧನಾಗಬೇಕಾದ ಅಮಾಯಕ ಗಗನಯಾನಿಯ ಕತೆ, ತಮ್ಮ ದೇಶದ ಘನತೆ ಹೆಚ್ಚಿಸಿಕೊಳ್ಳಲು ನಾಯಿಯೊಂದನ್ನು ರಾಕೆಟ್ಟಿನಲ್ಲಿ ಅಂತರಿಕ್ಷಕ್ಕೆ ಕಳಿಸಿದ ಕತೆ, ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಹುಡುಗನನ್ನು ನಗರಕ್ಕೆ ಕರೆತಂದು ಪ್ರದರ್ಶನದ ಗೊಂಬೆಯಾಗಿಸಿ ಕಾಸುಮಾಡಿಕೊಂಡವರ ಕತೆ, ರೋಗಿಗಳನ್ನು ಪರೀಕ್ಷಿಸುವ ಮೊದಲು ವೈದ್ಯರು ಕೈತೊಳೆದಿರಬೇಕೆಂದ ವೈದ್ಯನೇ ಕೊನೆಗೆ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಕತೆ – ಹೀಗೆ ಹಲವು ವಿಚಿತ್ರ, ನೋವಿನ ಕತೆಗಳು ಇಲ್ಲಿವೆ. ಇಲ್ಲಿ ತನ್ನ ಏಳು ವರ್ಷಗಳ ಜೀವನವನ್ನು ಸಾಧನೆಯಿಂದ ಸಾರ್ಥಕಗೊಳಿಸಿಕೊಂಡ ಪುಟ್ಟಬಾಲಕನಿದ್ದಾನೆ, ಅರ್ಧ ತಾಸಿನ ಪ್ರಯೋಗಕ್ಕಾಗಿ ಹನ್ನೊಂದು ವರ್ಷಗಳನ್ನು ಪರದೇಶಿ ನೆಲದಲ್ಲಿ ದೈನೇಸಿಯಾಗಿ ಕಳೆದ ಖಗೋಳಜ್ಞ ಇದ್ದಾನೆ. ಬದುಕಿನ ವೈಚಿತ್ರ್ಯಗಳನ್ನು ಈ ಕೃತಿ ಸಶಕ್ತವಾಗಿ ಅನಾವರಣ ಮಾಡುತ್ತದೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE