ಲೇಖಕ ಡಾ. ಲಿಂಗರಾಜ ರಾಮಪೂರ ಅವರು ಸುಮಾರು 35 ವಿಜ್ಞಾನಿಗಳ ಬದುಕು ಹಾಗೂ ವೈಜ್ಞಾನಿಕ ಅನ್ವೇಷಣೆ-ಸಾಧನೆಗಳನ್ನು ವಿವರಿಸಿರುವ ಕೃತಿ-ಜ್ಞಾನಿ-ವಿಜ್ಞಾನಿ. ಭಾಷೆಯು ಸರಳವಾಗಿದ್ದು, ವಿಜ್ಞಾನಿಗಳ ಸಂಶೋಧನೆಯ ಹಿಂದಿನ ಕುತೂಹಲಕರ, ಸ್ವಾರಸ್ಯಕರ ವಿಚಾರಗಳನ್ನು ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ವಿಜ್ಞಾನಾಸಕ್ತರಿಗೆ ತುಂಬಾ ಉಪಯುಕ್ತವಾದ ಪುಸ್ತಕವಿದು.
ಮುನ್ನುಡಿ
ಕೃತಿಕಾರರಾದ ಡಾ. ಲಿಂಗರಾಜ ರಾಮಾಪೂರ ನನ್ನ ಮೆಚ್ಚಿನ ಗೆಳೆಯ. ಇದನ್ನು ಹೇಳಿಕೊಳ್ಳಲು ನನಗೆ ಅತ್ಯಂತ ಹೆಮ್ಮೆ. ವಿದ್ಯಾರ್ಥಿ ದೆಸೆಯಿಂದಲೂ ರಚನಾತ್ಮಕತೆ ಹಾಗೂ ಸೃಜನಶೀಲತೆಯನ್ನು ಮೈಗೂಡಿಸಿಕೊಂಡವ. ಲಿಂಗರಾಜು ಕವಿ, ಕಲಾವಿದ, ಬರಹಗಾರ ಹಾಗೂ ಉತ್ತಮ ಗಾಯಕ ಕೂಡ. ನಡು ವಯಸ್ಸಿಗೆ ಬರುವ ಮುನ್ನವೇ ಹಲವಾರು ವೈಜ್ಞಾನಿಕ ಕೃತಿಗಳನ್ನು ರಚನೆ ಮಾಡಿ, ವಿಜ್ಞಾನ ಸಾಹಿತ್ಯದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದವರಾಗಿದ್ದಾರೆ. ಆ ಮೂಲಕ ಶೈಕ್ಷಣಿಕ ವಲಯದಲ್ಲಿ ಮಾದರಿ ಶಿಕ್ಷಕರಾಗಿದ್ದಾರೆಂದರೆ ಅತಿಶಯೋಕ್ತಿಯಲ್ಲ. ರಾಮಾಪೂರ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ‘ಸೈಂಟಿಸ್ಟ್’ ಎಂಬ ಉಪನಾಮವನ್ನು ಹೊಂದಿದ್ದರು. ಎಲ್ಲವನ್ನೂ ವಿಜ್ಞಾನದ ಒಳಗಣ್ಣಿನಿಂದ ನೋಡುತ್ತಿದ್ದ ಅವರನ್ನು ಮಿತ್ರರು ಪ್ರೀತಿಯಿಂದ ಸೈಂಟಿಸ್ಟ್ ಎಂದೇ ಸಂಬೋಧಿಸುತ್ತಿದ್ದರು.
‘ವಿಜ್ಞಾನ’ ಪದವನ್ನು ವಿಭಾಗಿಸಿದರೆ ‘ವಿ’ ಮತ್ತು ‘ಜ್ಞಾನ’ ಎಂಬೆರಡು ಬಗೆಯಾದೀತು. ‘ವಿ’ ಎಂದರೆ ವಿಶೇಷವಾದ, ಆಳವಾದ, ಇನ್ನಿಲ್ಲದಂತೆ ತಿಳಿಯುವ ಎನ್ನುವುದನ್ನು ಸೂಚಿಸಿದರೆ, ‘ಜ್ಞಾನ’ ವೆಂದರೆ ಅರಿವು, ತಿಳಿವಳಿಕೆ ಎಂದಾಗಿದೆ. ಅಂದರೆ ಯಾವುದೇ ಒಂದು ವಸ್ತು ವಿಷಯವನ್ನು ಇನ್ನಿಲ್ಲದಂತೆ ತಿಳಿದುಕೊಳ್ಳುವ ಒಂದು ಅಧ್ಯಯನ ವಿಧಾನವೇ ‘ವಿಜ್ಞಾನ’ ಎಂದೆನಿಸುತ್ತದೆ. ಹಾಗೆಯೇ “ಜ್ಞಾನವನ್ನು ಒಂದು ವ್ಯವಸ್ಥಿತ ಕ್ರಮದಲ್ಲಿ ಅರಿಯುವ ವಿಧಾನವನ್ನು ವಿಜ್ಞಾನ” (Science is the systematic study of knowledge)ಎಂದು ವ್ಯಾಖ್ಯಾನಿಸಲಾಗಿದೆ. ಹಾಗೆ ನೋಡಿದರೆ ‘ವಿಜ್ಞಾನ ಎಂಬುದು ಒಂದು ವಿಷಯವಲ್ಲ, ವಿಷಯಗಳನ್ನು ಅರಿಯುವ ವಿಧಾನವೆನ್ನುವುದು ಸರಿ ವ್ಯಾಖ್ಯಾನವೆನಿಸುತ್ತದೆ. ವಿಷಯ ಕಲಿಯುವ ವಿಧಾನದಲ್ಲಿ ಸತ್ಯಕ್ಕೇ ಇನ್ನಿಲ್ಲದ ಸ್ಥಾನಮಾನ. ಸಾಹಿತ್ಯವು ಸತ್ಯಕ್ಕೆ ಹತ್ತಿರವಾದ ಸುಳ್ಳನ್ನು ಹೇಳಿದರೆ, ವಿಜ್ಞಾನ ಹೆಚ್ಚು ಸತ್ಯವನ್ನೇ ಹೇಳಬೇಕಾಗುತ್ತದೆ. ಅದೇ ಅದರ ಹೆಗ್ಗಳಿಕೆ. ಜಗತ್ತಿನಲ್ಲಿ ವಿಜ್ಞಾನದ ವಿವಿಧ ಜ್ಞಾನ ಶಾಖೆಗಳಲ್ಲಿ ಅದೆಷ್ಟೂ ಕಷ್ಟನಷ್ಟಗಳಿಂದ ಅಧ್ಯಯನ ಮಾಡಿ ಹೀಗೆ ಮಾಡುವಲ್ಲಿ ತಮ್ಮೆಲ್ಲ ವ್ಯಯಕ್ತಿಕ ಸುಖ, ಸಂತೋಷ, ನೆಮ್ಮದಿಗಳಿಂದ ವಂಚಿತರಾಗಿ ಅಹರ್ನಿಶಿ ಮಾಡಿದ ತಮ್ಮ ಸಂಶೋಧನೆಯ ಫಲವೇ ಇಂದು ನಾವು ಅನುಭವಿಸುತ್ತಿರುವ ಸುಖ, ಸಂತೋಷ, ನೆಮ್ಮದಿಗಳಿಗೆ ಹಾದಿಯಾಗಿದೆ. ಈ ಶ್ರಮ-ಸಾಧನೆಗೆ ದೇವರಿಗೆ ಕೊಡುವ ಗೌರವಗಳಂತೆ ವಿಜ್ಞಾನಿಗಳಿಗೂ ನಾವು ಗೌರವ ಕೊಡಲೇಬೇಕಾಗಿದೆ. ಅಂತಹ ವಿಜ್ಞಾನಿಗಳ ಕುರಿತಾದ “ಜ್ಞಾನಿ-ವಿಜ್ಞಾನಿ” ಕೃತಿ ವಿಜ್ಞಾನಿಗಳ ಪರಿಚಯ ಮಾಡಿಕೊಡುವಲ್ಲಿ ಬಹುಮಟ್ಟಿಗೆ ಸಾರ್ಥಕವಾಗಿದೆ ಎಂಬುದು ನನ್ನ ಅಂಬೋಣ.
ಈ ಕೃತಿಯಲ್ಲಿ ದಾಖಲಿಸಿರುವ ವಿಜ್ಞಾನಿಗಳ ಸಾಧನೆ, ಸಂಶೋಧನೆ, ಪ್ರಕೃತಿ ಪರಿಸರ ಕಾಳಜಿ, ನೀರು, ನೆಲ, ಜಲ ರಕ್ಷಣೆ, ವಿಜ್ಞಾನ ತಂತ್ರಜ್ಞಾನ ಬಳಕೆಯ ಪರಿಮಿತಿಗಳನ್ನು ತಿಳಿಹೇಳುವಂತಹ ಮಹತ್ವದ ಅಂಶಗಳನ್ನು ಓದುಗರಿಗೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. “ತಿಳಿಮನ ಜ್ಞಾನ-ವಿಜ್ಞಾನ, ಆಗಲಿ ನವಯುಗ ಸುಜ್ಞಾನ” ಎಂಬ ಅರಿವನ್ನು ಈ ಕೃತಿಯ ಮೂಲಕ ಪರಿಚಯಿಸುವ ಪ್ರಯತ್ನವನ್ನು ಲೇಖಕರು ಉಣಬಡಿಸಿದ್ದಾರೆ.
ಡಾ.ಲಿಂಗರಾಜ ರಾಮಾಪೂರ ವೃತ್ತಿಯಲ್ಲಿ ಶಿಕ್ಷಕರು ಆದರೆ ಪ್ರವೃತ್ತಿಯಲ್ಲಿ ವಿಜ್ಞಾನ ಸಂವಹನಕಾರರು. ಜನರ ಬಳಿಗೆ ವಿಜ್ಞಾನವನ್ನು ಕೊಂಡೊಯ್ಯುವ ಕಾರ್ಯದಲ್ಲಿ ತಮ್ಮನ್ನು ವಿದ್ಯಾರ್ಥಿದೆಸೆಯಿಂದಲೇ ನಿರಂತರವಾಗಿ ತೊಡಗಿಸಿಕೊಂಡವರು. ಭಾಷಣ, ನಾಟಕ, ಹಾಡು, ಕತೆ, ಕವನದ ಮೂಲಕ ವಿಜ್ಞಾನದ ಮೂಲಕ ಸಮಾಜ ಬದಲಾವಣೆಗೆ ಶ್ರಮಿಸಿದವರು. ವಿಜ್ಞಾನ ಲೇಖಕರೆಂದು ಗುರುತಿಸಿಕೊಂಡಿರುವ ಇವರು ಹಲವು ಮಹತ್ತರ ಕೃತಿಗಳನ್ನು ವಿಜ್ಞಾನ ಸಾಹಿತ್ಯಕ್ಕೆ ನೀಡಿದ್ದಾರೆ. ‘ಪರಸರದೊಳಗಿನ ಸತ್ಯದ ಮಾತು’, ‘ವಿಜ್ಞಾನದಲೆಯ ಬೆಳಕು’ ಲೇಖನ ಗುಚ್ಛಗಳು, ‘ಭೂಮಿ ಮಾರಾಟಕ್ಕಿಲ್ಲ’, ‘ನೀರ್ ಬಾರ್’, ‘ನಿಸರ್ಗ ನ್ಯಾಯ’ ಇತ್ಯಾದಿ ನಾಟಕ ಗುಚ್ಛಗಳು, ‘ವೈಜ್ಞಾನಿಕ ಕಥೆಗಳು-ಕಥಾ ಸಾಹಿತ್ಯ’, ‘ಗುಬ್ಬಿಗೊಂದು ಮನೆಯ ಮಾಡಿ-ಮಕ್ಕಳ ವಿಜ್ಞಾನ ಕಾದಂಬರಿ’ ‘ವಿಜ್ಞಾನದ ಅಲೆದಾಟ-ಪ್ರವಾಸ ಸಾಹಿತ್ಯ’, ‘ವಿಜ್ಞಾನಮಯಿ-ಕವನ ಸಂಕಲನ’ ಮುಂತಾದ ಕೃತಿಗಳ ಮೂಲಕ ಓದುಗರ ಹೃದಯದಲ್ಲಿ ನೆಲೆಸಿದವರು. ‘ಗುಬ್ಬಿಗೊಂದು ಮನೆಯ ಮಾಡಿ’ ಕೃತಿಗೆ ಗ್ರಂಥಪಾಲಕ ಹೊಂಬಳ ಪ್ರಶಸ್ತಿ, ‘ವಿಜ್ಞಾನದ ಅಲೆದಾಟ’ ಕೃತಿಗೆ ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿಯ ‘ಪುಸ್ತಕ ಚಂದಿರ’ ಪ್ರಶಸ್ತಿಯೂ ದೊರೆತ್ತಿದ್ದು ಅವರ ಸಾಹಿತ್ಯ ಪಯಣದಲ್ಲಿ ಮೈಲುಗಲ್ಲು.
ಇದೇ ಸಾಲಿಗೆ ಸೇರಲಿರುವ ಅವರ ಮತ್ತೊಂದು ವೈಜ್ಞಾನಿಕ ಪುಸ್ತಕವಿದು. ‘ಜ್ಞಾನಿ ವಿಜ್ಞಾನಿ’ ಈ ಪುಸ್ತಕದ ಶೀರ್ಷಿಕೆ ಅಕ್ಷರಶಃ ರಾಮಾಪೂರವರ ವ್ಯಕ್ತಿತ್ವಕ್ಕೂ ಹೊಂದಾಣಿಕೆ ಆಗುತ್ತದೆ. ಸ್ವತಃ ಹಲವು ಕಿರು ಸಂಶೋಧನೆಗಳನ್ನು ಮಾಡಿ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಗಳ ಮೂಲಕ ಮಕ್ಕಳ ಸಂಶೋಧನಾ ಪ್ರಬಂಧಗಳಿಗೆ ಮಾರ್ಗದರ್ಶನ ನೀಡಿ, ಹತ್ತು ಹಲವು ಬಾಲವಿಜ್ಞಾನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟ ಡಾ.ಲಿಂಗರಾಜ ರಾಮಾಪೂರ ಜ್ಞಾನಿಯೂ ಹೌದು, ವಿಜ್ಞಾನಿಯೂ ಹೌದು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಲವು ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿದವರು. ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ, ಇಸ್ರೋದ ನಿರ್ದೇಶಕರಾದ ಸತೀಶ ಧವನ್, ಡಾ.ಎ.ಎಸ್.ಕಿರಣಕುಮಾರ, ಚಂದ್ರಯಾನದ ರೂವಾರಿ ಡಾ.ಶಿವಕುಮಾರ್, ಕರ್ನಾಟಕದ ಹೆಮ್ಮೆಯ ವಿಜ್ಞಾನಿ, ಭಾರತರತ್ನ ಸಿ.ಎನ್.ಆರ್.ರಾವ್ ಹಾಗೂ ಯು.ಆರ್.ರಾವ್ ಹೀಗೆ ಇನ್ನೂ ಹಲವು ಹಿರಿಯ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರಿಂದ ಮಾರ್ಗದರ್ಶನ ಪಡೆದವರು.
ಈ ಪುಸ್ತಕವನ್ನು ಒಮ್ಮೆ ಓದಿದರೆ ವೈಜ್ಞಾನಿಕ ಅನ್ವೇಷಣೆಗಳ ಸಂಪೂರ್ಣ ಚಿತ್ರಣ ಅರ್ಥವಾಗುತ್ತದೆ. ಈ ಪುಸ್ತಕದಲ್ಲಿ 35 ವಿಜ್ಞಾನಿಗಳ ಜೀವನ ಚರಿತ್ರೆಯಿದೆ. ಎಲ್ಲರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿರುವ ವಿವರಣೆ, ವಿಜ್ಞಾನಿಗಳ ಜೀವನ ಚಿತ್ರಣವಿಲ್ಲಿದೆ. ಲೇಖಕರು ವಿಜ್ಞಾನಿಗಳ ಸಂಶೋಧನೆಯ ಹಿಂದಿನ ಕುತೂಹಲಕರ, ಸ್ವಾರಸ್ಯಕರ ವಿಚಾರಗಳನ್ನು ತುಂಬಾ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ವಿಜ್ಞಾನಾಸಕ್ತರಿಗೆ ತುಂಬಾ ಉಪಯುಕ್ತವಾದ ಪುಸ್ತಕವಿದು. ನಾಡಿನ ಸಾರಸ್ವತ ಲೋಕದಲ್ಲಿ ಈ ಪುಸ್ತಕ ಚಿರಸ್ಥಾಯಿಯಾಗಿ ಉಳಿಯಲಿ ಎನ್ನುವುದೇ ನನ್ನ ಆಶಯ.
- ಎಂ.ಗುರುಸಿದ್ಧಸ್ವಾಮಿ
ಜನ ವಿಜ್ಞಾನ ಚಳವಳಿ ಕಾರ್ಯಕರ್ತ,
ದಾವಣಗೆರೆ. ಮೊ : 9880531823
©2024 Book Brahma Private Limited.