‘ಪರಿಮಳದ ಹಾದಿಯ ಪಯಣಿಗರು’ ಮಲ್ಲಿಕಾರ್ಜುನ ಕಡಕೋಳ ಅವರು ಬರೆದಿರುವ ಸಾಂಸ್ಕೃತಿಕ ವ್ಯಕ್ತಿ ಚಿತ್ರಗಳ ಆಯ್ದ ಅಂಕಣ ಬರಹಗಳು. ಕೃತಿಗೆ ಲಕ್ಷ್ಮೀಪತಿ ಕೋಲಾರ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಗೆಳೆಯ ಮಲ್ಲಿಕಾರ್ಜುನ ಕಡಕೋಳರು ನಮ್ಮ ಸಂದರ್ಭದ ಮುಖ್ಯ ಲೇಖಕರಷ್ಟೇ ಅಲ್ಲದೆ, ಬಾಲ್ಯ ಸಹಜ ಕುತೂಹಲ ಹಾಗೂ ಪ್ರೌಢಾವಸ್ಥೆಯ ಸೂಕ್ಷ್ಮತೆಗಳೆರಡೂ ಹದವಾಗಿ ಬೆರೆತ ಅಪರೂಪದ ಬರಹಗಾರರು, ಅವರ ಬರವಣಿಗೆಯ ಮುಖ್ಯ ಶಕ್ತಿಯೇ ರಾಜಿಗೆಡೆಯಿಲ್ಲದ ಪ್ರಾಮಾಣಿಕತೆ ಮತ್ತು ಘನತೆ. ಅವರ ಮಾತುಗಳ ಆಳದಲ್ಲಿ ಮಾನವೀಯ ಅಂತಃಕರಣದ ಸಲಿಲಧಾರೆಯ ಜಲಜಲ ಸದ್ದು ಕೂಡ ಆಲಿಸುವಂತಾಗಿ ಓದು ಆಪ್ಯಾಯಮಾನ ಎನಿಸುತ್ತದೆ. ಮನುಷ್ಯ ತನ್ನ ಇತಿಹಾಸದಲ್ಲಿ ಅಗಾಧ ಪ್ರಮಾಣದಲ್ಲಿ ಸೃಷ್ಟಿಸಿದ್ದು ನಿರರ್ಥಕವಾದ ಕಸದ ಗುಡ್ಡೆಗಳನ್ನೇ! ಈ ನೆಲದ ತಲೆಯಿಂದಲಂತೂ ಎಂದೆಂದಿಗೂ ಖಾಲಿಯಾಗದೇನೋ ಎಂಬಂತೆ ಅಮರಿಕೊಂಡಿರುವ ವ್ಯರ್ಥ ಕಸವನ್ನು ಶುದ್ಧ ಮನಸ್ಸಿನಿಂದ ಪಕ್ಕಕ್ಕೆ ತಳ್ಳಿ, ಕಡಕೋಳ ಮಡಿವಾಳಪ್ಪನ ಎಚ್ಚರದ ತಾತ್ವಿಕ ಕಣ್ಣುಗಳೊಂದಿಗೆ ತನ್ನಾಧ್ಯತೆಯ ಬದುಕಿನ ಶ್ರೇಷ್ಠ ಮೌಲ್ಯಗಳನ್ನೇ ಪದೇ ಪದೇ ಹೆಕ್ಕಿ ಹೆಕ್ಕಿ ಓದುಗರೆದುರಿಗೆ ಮಂಡಿಸುವ ಇವರ ಜೀವ ಪ್ರೀತಿಯ ಬದ್ಧತೆ ಎದೆ ತೋಯಿಸುವಂಥದ್ದು. ವಚನ, ತತ್ವಪದ ಹಾಗೂ ಜಾನಪದದ ಮೂಲ ಪರಂಪರೆಗಳೆಲ್ಲವೂ ತಲೆಯಲ್ಲಿ ಸಂಚಯಗೊಂಡ ಕಸವನ್ನು ಬಳಿದು ಹಾಕುವ ಧೀಮಂತ, ಇಹದ ನಿರ್ವಾಣಕ್ಕೆ ಹತ್ತಿರವಾಗುತ್ತಾನೆಂದು ಪದೇ ಪದೇ ಹೇಳುತ್ತ ಬಂದದ್ದು ಕೂಡ ಈ ಹಿನ್ನೆಲೆಯಲ್ಲಿಯೇ. ಈ ಮಾತಿಗೆ ಲೇಖಕ ಮಲ್ಲಿಕಾರ್ಜುನ ಕಡಕೋಳರಷ್ಟೇ ಅಲ್ಲದೆ, ಇಲ್ಲಿನ ಬಹುತೇಕ ವ್ಯಕ್ತಿತ್ವಗಳು ಕೂಡ ಉತ್ತಮ ಮಾದರಿಯ ನಿದರ್ಶನಗಳಾಗಿ ಕಂಡುಬರುತ್ತಾರೆ. ಈ ಕಾರಣದಿಂದಾಗಿಯೇ ಈ ಕೃತಿಗೆ ತನ್ನಿಂತಾನೇ ಜೀವಮೌಲ್ಯವೊಂದು ಪ್ರಾಪ್ತಿಯಾಗಿಬಿಟ್ಟಿದೆ. ಕೃತಿಯೊಂದು ಶ್ರೇಷ್ಠವಾಗಲು ಇನ್ನೇನು ಬೇಕಿದೆ? ಹಾಗಾಗಿ ಈ ಕೃತಿಗೆ ತಾಂತ್ರಿಕ ಮೌಲ್ಯಮಾಪನದ ಅಗತ್ಯವಿರಬಹುದೇ ಹೊರತು ತಾತ್ವಿಕವಾದದ್ದಲ್ಲ ಎಂದಿದ್ದಾರೆ.
©2024 Book Brahma Private Limited.