‘ನೆನಪು ಏಕತಾರಿ’ ವಿವಿಧ ವ್ಯಕ್ತಿಚಿತ್ರಗಳ ರಾಗಮಾಲೆ ವೈದೇಹಿ ಅವರ ಕೃತಿ. ಈ ಕೃತಿಗೆ ಲೇಖಕ ಮನು ದೇವದೇವನ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ..ಬರಹಗಾರರು, ಪಂಡಿತರು, ಹೋರಾಟಗಾರರು ಮಾತ್ರವಲ್ಲ, ಅಪರಿಚಿತ ಮತ್ತು ಅನಾಮಧೇಯ ವ್ಯಕ್ತಿಗಳೊಂದಿಗೆ ಓರ್ವ ಸೂಕ್ಷ್ಮಜ್ಞ ಲೇಖಕಿಯು ಹೊಂದಿದ ಭಾವನಾತ್ಮಕ, ವೈಚಾರಿಕ, ಪ್ರೀತಿಯ ಹಾಗೂ ಆಪ್ತ ಸಂಬಂಧದ ಪ್ರತಿಫಲನ - ನೆನಪು ಏಕತಾರಿ. ಇಲ್ಲಿ ಲೇಖನಗಳು, ಪ್ರಬಂಧಗಳು, ಕವನಗಳು, ಸಂದರ್ಶನಗಳಿವೆ. ಇಲ್ಲಿನ ಲೇಖಕರು, ಚಿಂತಕರು, ಕವಿಗಳು ವೈದೇಹಿಯವರ ಅಂತರಂಗದೊಂದಿಗೆ ತಂತು ಬೆಸೆದುಕೊಂಡವರು. ಇದರೆಲ್ಲ ಒಳನೋಟಗಳೂ ಹೊಮ್ಮುವುದು ವೈದೇಹಿಯವರ ವ್ಯಕ್ತಿನಿಷ್ಠ ನೆಲೆಯಿಂದ. ತಾನು ಬರೆಯುವ ವ್ಯಕ್ತಿಗಳ ಕುರಿತಿರುವ ಗೌರವಪೂರ್ಣ ಲಲಿತ ನೋಟದಿಂದಾಗಿ ವೈದೇಹಿಯವರ ಗದ್ಯ ಅವರ ಕುರಿತ ಬರಹಗಳನ್ನು ಸುಗಂಧಪೂರಿತ ಪುಷ್ಪಗಳಂತೆ ಅರಳಿಸುತ್ತದೆ. ವೈಯಕ್ತಿಕ ಹಾಗೂ ವೈಚಾರಿಕ ಆಯಾಮಗಳು ಸಾವಯವವಾಗಿ ಒಂದಕ್ಕೊಂದು ಬೆಸೆದುಕೊಂಡು ಉತ್ಕೃಷ್ಟವಾಗಿ ಬಹುಸೂಕ್ಷ್ಮವಾಗಿ ಅನಾವರಣಗೊಳ್ಳುವುದರೊಂದಿಗೆ ಇಲ್ಲಿನ ಪ್ರತಿಯೊಂದು ಲೇಖನವೂ ತನ್ನನ್ನೇ ಮೀರಿಕೊಳ್ಳುವ ಲೇಖಕಿಯ ಗುಣಕ್ಕೆ ಪ್ರಮಾಣದಂತಿದೆ. ಬಹುಮುಖ್ಯವಾಗಿ ಇಲ್ಲಿನ ಬರಹಗಳಲ್ಲಿ ಕಾಣುವ ಸಂಸ್ಕೃತಿ, ಸಾಹಿತ್ಯ, ಸಮಾಜಗಳ ಕುರಿತ ಮಹತ್ವದ ಸಂಗತಿಗಳ ಸಹಜ ಮತ್ತು ನಿರ್ಬಂಧ ಹರಿವು ಕುತೂಹಲಕಾರಿ. ಒಟ್ಟಿನಲ್ಲಿ ಹೇಳಬೇಕೆಂದರೆ, ಕನ್ನಡ ಸಂಸ್ಕೃತಿಗೆ ಹೆಚ್ಚಿನ ಮೌಲ್ಯ, ಅರ್ಥ ಮತ್ತು ಮಹತ್ತನ್ನು ಜೋಡಿಸುವ 'ನೆನಪು ಏಕತಾರಿ ನಿಶ್ಚಯವಾಗಿಯೂ ಒಂದು ಮಾದರಿ ಕೃತಿ ಎಂದಿದ್ದಾರೆ.
©2024 Book Brahma Private Limited.