ಮಲ್ಲಿಕಾರ್ಜುನ ಕಡಕೋಳ ವಾಚಿಕೆ-19 ಕೃತಿಯು ಶುಲಾಬಾಯಿ ಎಚ್. ಕಾಳಮಂದರಗಿ ಅವರ ಸಂಪಾದಿತ ಕೃತಿಯಾಗಿದೆ. ಇದು ಮಲ್ಲಿಕಾರ್ಜುನ ಕಡಕೋಳ ಅವರ ಸಮಗ್ರ ಸಾಹಿತ್ಯ ವಾಚಿಕೆಯ ಸಂಕಲನವಾಗಿದೆ. ಅವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವರ ಒಟ್ಟು ಸಾಹಿತ್ಯ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ. ಇಲ್ಲಿ ಕಡಕೋಳರು ಬರೆಯುವ ಕತೆಗಳು ಮಾತ್ರವಲ್ಲ, ಅಂಕಣ ಬರಹ ಮತ್ತು ಇತರೆ ಎಲ್ಲಾ ಪ್ರಕಾರದ ಬರಹಗಳು ಕಥನಕಲೆಯ ಚೇತೋಹಾರಿ ಚಿತ್ರಕ ಶಕ್ತಿಗಳಿಂದಲೇ ಕೂಡಿರುತ್ತವೆ. ಸಹಜವಾಗಿ ಅವು 'ಪದ್ಯಗಂಧಿ' ಬರಹಗಳೆಂದು ವಿಮರ್ಶಕರಿಂದ ತಾರೀಘು ಮಾಡಿಸಿ ಕೊಳ್ಳುತ್ತವೆ. ಕೆಲವಂತೂ ಬಾಲ್ಯದ ನೆನಪುಗಳಾಗಿರದೇ 'ನೆನಪಿನಾಳದ ಮರೆಯಬಾರದ ಬಾಲ್ಯವೆಂದು' ನೆನಪಿಸಿಕೊಳ್ಳುವಂತಿವೆ. ಹಳೆಯ ಹೈದರಾಬಾದ್ ಕರ್ನಾಟಕ ಸೇರಿದಂತೆ ಅವು ಕಲ್ಯಾಣ ಕರ್ನಾಟಕವೆಂಬ ಹೊಸ ಹೆಸರಿನ ಮೊಗಲಾಯಿ ನೆಲದ ಸಂಕಟಗಳು, ನೋವು, ನಲಿವು, ದರ್ದು, ಕನಸು, ಕನವರಿಕೆ, ಊಳಿಗಮಾನ್ಯ ವ್ಯವಸ್ಥೆ, ಹೆಣ್ಣಿನ ಮೇಲೆ ಜರುಗುವ ದೌರ್ಜನ್ಯ ಹೀಗೆ ನೆಲಬದುಕಿನ ಜೀವಂತಿಕೆಯನ್ನು ಸೆರೆಹಿಡಿದು ನಿಲ್ಲಿಸಿದ ನಿಜದ ನೆಲೆಗಳು. ರಂಗಭೂಮಿ ಮತ್ತು ತತ್ವಪದಗಳ ಬಗ್ಗೆ ತುಂಬಾ ಕಾಳಜಿ ಮತ್ತು ಖಚಿತವಾಗಿ ಮಾತನಾಡಬಲ್ಲ ಬೆರಳೆಣಿಕೆಯ ಚಿಂತಕರಲ್ಲಿ ಮಲ್ಲಿಕಾರ್ಜುನ ಕಡಕೋಳ ಪ್ರಮುಖರು. ಅದನ್ನು ಅವರು ತಮ್ಮ ಅನೇಕ ಕೃತಿಗಳ ಮೂಲಕ ಸಾಬೀತು ಪಡಿಸಿದ್ದಾರೆ. ಪರಂಪರೆ ಮತ್ತು ಪ್ರಯೋಗಶೀಲತೆಯ ಅನುಸಂಧಾನದ ಮಾರ್ಗದಲ್ಲಿ ಚಿಂತಿಸುವ, ವೈಚಾರಿಕ ನೆಲೆಗಲ್ಲೊಂದನ್ನು ರೂಪಿಸಿಕೊಂಡಿರುವ ಕಾರಣದಿಂದ ಅವರಿಗೆ ಅದು ಸಾಧ್ಯವಾಗಿದೆ. ಅವರ ಹುಟ್ಟೂರಿನ ಕಡಕೋಳ ಮಡಿವಾಳಪ್ಪನ ನೆಲದ ಸತ್ವಗಳು ಅವರ ಸಾಹಿತ್ಯ ಚಿಂತನೆಯ ಗಟ್ಟಿ ಕಾಳುಗಳು. ಅವು ಹತ್ತಿಯೊಳಗಣ ಬಿತ್ತುವ ಬೀಜದ ಕಾಳುಗಳು. ತಮ್ಮ ಸಗರನಾಡು ಪ್ರಾಂತ್ಯದ ಕಂಪು ಸೂಸುವ ಕಲಾತ್ಮಕತೆ ಜತೆಯಲ್ಲಿ ಆದ್ರ್ರತೆ, ಆಪ್ತತೆ ತಾನೇ ತಾನಾಗಿ ಕಡಕೋಳರಿಗೆ ಪ್ರಾಪ್ತವಾಗಿದೆ. ಎಡಪಂಥೀಯ ಧೋರಣೆ ಇವರ ಒಟ್ಟು ಬರಹದಲ್ಲಿ ಸಾಂದ್ರೀಕರಿಸಿದೆ.
©2024 Book Brahma Private Limited.