ಮಾನಿನಿಯ ಮನದಳಲು

Author : ಮಾಲತಿ ಮುದಕವಿ

Pages 184

₹ 165.00




Year of Publication: 2021
Published by: ಸಾಗರಿ ಪ್ರಕಾಶನ
Address:  # 275/F6-1, ಮೊದಲ ಮಹಡಿ, 4ನೇ ಪಶ್ಚಿಮ ಅಡ್ಡರಸ್ತೆ, ಉತ್ತರಾದಿ ಮಠ,ಮೈಸೂರು-570004
Phone: 9740129274

Synopsys

‘ಮಾನಿನಿಯ ಮನದಳಲು’  ವ್ಯಕ್ತಿ ಚಿತ್ರಣದ ಈ ಕೃತಿಯನ್ನು ಲೇಖಕಿ ಮಾಲತಿ ಮುದಕವಿ ಅವರು ರಚಿಸಿದ್ದಾರೆ. ಹೆಣ್ಣಿನ ಶೋಷಣೆ, ದಬ್ಬಾಳಿಕೆಗಳು. ಮತ್ತದನ್ನು ಅವರು ಎದುರಿಸಿದ ಪರಿಯನ್ನು ಇಲ್ಲಿ ವಿವರಿಸಿದ್ದಾರೆ. 
"ಮತ್ತೆ ಕಲ್ಲಾದಳೇ ಅಹಲ್ಯೆ" ಯಲ್ಲಿ ಒಂದು ಭಿನ್ನ ವಿಚಾರ ಬಿಂಬಿತವಾಗಿದೆ. ಶತಮಾನಗಳ ಹಿಂದೆ ಕಲ್ಲಾದ ಅಹಲ್ಯೆಯನ್ನು ಶ್ರೀರಾಮ ಚೈತನ್ಯ ತುಂಬಿ ಬದುಕು ಕೊಟ್ಟಿದ್ದ, ಪತಿ ಪತ್ನಿಯರನ್ನು ಒಂದುಗೂಡಿಸಿದ್ದ. ತಪ್ಪೇ ಎಸಗದ ಸೀತೆಗೆ ರಾಮ ವಿಧಿಸಿದ ಶಿಕ್ಷೆಗೆ ಪ್ರತಿಭಟನೆಯಾಗಿ ಅಹಲ್ಯೆ, ತನ್ನನ್ನು ಮತ್ತೊಮ್ಮೆ ಕಲ್ಲಾಗಿಸು ಎಂದು ಶಿಕ್ಷೆಗಾಗಿ ಬೇಡಿಕೊಂಡಳು. ಇದಕ್ಕಿಂತ ಘೋರವಾದ ನ್ಯಾಯನಿರ್ಣಯ ಇರಲಿಕ್ಕಿಲ್ಲ ರಾಮನ ಪಾಲಿಗೆ. ತಾನು ಮಾಡಿದ ತಪ್ಪಿಗೆ ತಾಯಿಯ ಸ್ಥಾನದಲ್ಲಿರುವವಳು ಸ್ವಯಂ ಶಿಕ್ಷೆ ಬೇಡಿದಳು. ತನಗೊಂದು, ಪರರಿಗೊಂದು ನ್ಯಾಯ, ಇದು ಸಲ್ಲದು ಎನ್ನುವದನ್ನು ಅಹಲ್ಯೆ ಎತ್ತಿ ತೋರಿದಳು.

"ದ್ರೌಪದಿಯ ಅಂತರಂಗ" ವೂ ದ್ರೌಪದಿಯಂತೆಯೇ ಶಕ್ತಿಪೂರ್ಣವಾಗಿ, ಸುಲಲಿತವಾಗಿ ಮೂಡಿ ಬಂದಿದೆ. ಅತ್ತೆ ಕುಂತಿ ಮೂವರು ಗಂಡಂದಿರನ್ನು ಅನಿವಾರ್ಯವಾಗಿ ಹೊಂದಿದವಳು, "ಸೀತೆಯ ಸ್ವಗತ"ದಲ್ಲಿ ಸೀತೆಯು ವಾಲ್ಮೀಕಿ ಆಶ್ರಮಕ್ಕೆ ಹೋಗುವುದಕ್ಕೂ ಮೊದಲು ಅವಳಿಗೆ ತಾನು ರಾಮನಿಂದ ಪರಿತ್ಯಜಿಸಲ್ಪಡುವ ವಿಷಯ ಗೊತ್ತಿತ್ತೇ? ರಾಮನ ಮೇಲೆ ಬಂದ ಈ ಅಪವಾದವನ್ನು ಸೀತೆ ತಾನು ಹೊತ್ತುಕೊಂಡು ಅವನ ಅಪರಾಧದ ತೀವ್ರತೆಯನ್ನು ಕಡಿಮೆ ಮಾಡಿದ್ದು ತಿಳಿಯದ ವಿಷಯ! ಇಲ್ಲಿ ಲೇಖಕಿ ಆ ಆಂಶಕ್ಕೆ ಒತ್ತು ನೀಡಿ ಸೀತೆಯ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರುಗನ್ನು ಇತ್ತಿದ್ದಾರೆ. "ತಿಂಗಳನ ತಾರೆ". ಇಲ್ಲಿ ಋಷಿ ಬ್ರಹಸ್ಪತಿಯ ಹೆಂಡತಿ, ಚಂದ್ರನ ಪ್ರಿಯತಮೆಯಾದ ತಾರೆ ಇವಳು. ಪಂಚಕನ್ಯೆಯರ ಗುಂಪಿನಲ್ಲಿ ಇರುವದೇ ಸಂಶಯ ಎಂದು ಅನೇಕ ವಿದ್ವಾಂಸರ ವಾದ. ಏಕೆಂದರೆ ಅವಳು ಪುರುಷ ಪ್ರಪಂಚವು ಹೊಗಳುವಂಥ ಮಹಾಕಾರ್ಯವನ್ನೇನೂ ಸಾಧಿಸಿಲ್ಲ. ಅವಳ ಜೀವನದಲ್ಲಿ ಇರುವದೆಲ್ಲ ಚಂದ್ರನಂಥ ಕಾಮಾಂಧನನ್ನ ಪ್ರೀತಿಸಿ ಗೋಳಿಗೀಡಾದ ಕಥೆ. ಋಷಿಗಳ ಸ್ವಭಾವ, ದಿನಚರಿ ಗೊತ್ತಿದ್ದು ಮದುವೆಯಾದವಳಿಗೆ ಹೆಚ್ಚಿನ ನಿರೀಕ್ಷೆ ಇರಬಾರದಿತ್ತು ಎಂಬ ಚರ್ಚೆ ಇದೆ.

"ತಾರಾಂತರಂಗ ತಲ್ಲಣ" ಕ್ಷೀರಸಾಗರದಿಂದ ಜನ್ಮತಳೆದು ವಾನರ ರಾಜ ವಾಲಿಯನ್ನು ಮದುವೆಯಾದವಳು. ಸುಗ್ರೀವನನ್ನು ಪ್ರೀತಿಸಿದ್ದರೂ ವಾಲಿಯನ್ನು ಮದುವೆಯಾಗುವ ಅನಿವಾರ್ಯತೆ. ಜೀವನದ ಉದ್ದಕ್ಕೂ ನಿಷ್ಠೆ ಪಾಲಿಸಿದ ಪತಿವೃತೆ ಪಂಚ ಕನ್ಯೆಯರ ಸಾಲಿನಲ್ಲಿ ಸ್ಥಾನ ಪಡೆದವಳು. "ನಾನು ಮಂಡೋದರಿ".ಯಲ್ಲಿ ನೋಡಲು ಸೀತೆಯಂತೆಯೇ ಅಪ್ರತಿಮ ಸುಂದರಿಯಾದ ಮಂಡೋದರಿಯು ವಾಲ್ಮೀಕಿ ರಾಮಾಯಣದಲ್ಲಿ ಉಪೇಕ್ಷಿತ ಪಾತ್ರ. ಮಂಡೋದರಿಯ ಮಾಹಿತಿ ಸಿಗುವುದು ದುರ್ಲಭವಿರುವಾಗ ಲೇಖಕಿ ಅದನ್ನು ಸಂಪಾದಿಸಿರುವುದು ಪ್ರಶಂಸನೀಯ. "ಲೋಪಾಮುದ್ರಾ" ಇವಳು ಪುರಾಣ ಕಾಲದಲ್ಲಿ ಇದ್ದವಳು. ಚಿಕ್ಕ ವಯಸ್ಸಿನ ಸುರಸುಂದರಿ, ಜ್ಞಾನಿ, ವೃದ್ಧ ಋಷಿ ಅಗಸ್ತ್ಯರನ್ನು ಮದುವೆಯಾದವಳು. ಅಲ್ಲದೆ ನದಿಯಾಗಿ ರೂಪಾಂತರ ಹೊಂದಿದವಳು ಅಂತೆಲ್ಲ ಲೇಖಕಿ ದುರ್ಲಭ ಮಾಹಿತಿಯನ್ನು ಸಂಪಾದಿಸಿ ಸವಿಸ್ತಾರವಾಗಿ ಬರೆದಿದ್ದಾರೆ.

 "ಕುಂತಿ". ಮಹಾಭಾರತದಲ್ಲಿ ಅತಿ ಹೆಚ್ಚು ಕಷ್ಟ ಅನುಭವಿಸಿದ ಮಹಿಳೆ. ಈ ಕುರಿತ ಮಕ್ಕಳನ್ನು ಪಡೆಯಲು, ಅವರಿಗೆ ಅವರ ಹಕ್ಕು ಕೊಡಿಸಲು, ಒಗ್ಗಟ್ಟಿನಲ್ಲಿರಿಸಲು ಜೀವನದುದ್ದಕ್ಕೂ ಹೋರಾಡಿದವಳು ಕುಂತಿ. ವೀರ ಪತಿ, ಶೂರ ಸುತರನ್ನು ಹೊಂದಿದ್ದರೂ ಸುಖ, ಶಾಂತಿ, ಸಮಾಧಾನದಿಂದ ವಂಚಿತಳು ಅನ್ನುವುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.

"ಗಾಂಧಾರಿ". ಕಣ್ಣಿದ್ದೂ ಕುರುಡಳಾದ ಈ ಕುರುವಂಶದ ಸೊಸೆಯ ಮನದಳಲನ್ನು ಲೇಖಕಿ ಕಾರುಣ್ಯಪೂರ್ಣವಾಗಿ ಚಿತ್ರಿಸಿದ್ದಾರೆ.ಬಾಲಸಹಜವಾದ ಆಟ-ತುಂಟಾಟಗಳನ್ನು ಆಡಿದರೂ, ಒಮ್ಮೆಯೂ ಆ ಮಕ್ಕಳನ್ನು ಕಣ್ತೆರೆದು ನೋಡಲಾಗದ ಕಠಿಣ ಹೃದಯದ ಮಾತೆಯ ಬಗೆಗೆ ಲೇಖಕಿಯ ಮನದಲ್ಲಿ ಅನುಕಂಪವಿದೆ.

"ಊರ್ಮಿಳಾ". ಲಕ್ಷ್ಮಣನ ಹೆಂಡತಿ.ರಾಮಾಯಣದಲ್ಲಿ ನಿರ್ಲಕ್ಷ್ಯಿತ ಮಹಿಳೆ. ಎಲ್ಲಿಯೂ ಅವಳ ತ್ಯಾಗ-ಸಹನೆಗಳ ಉಲ್ಲೇಖವಿಲ್ಲ. ಆದರೆ ಇವಳದು ದಿವ್ಯ ವ್ಯಕ್ತಿತ್ವ."ಕೌಶಲ್ಯಾ". ಶ್ರೀರಾಮನ ತಾಯಿಯಾಗುವ ಭಾಗ್ಯ ಪಡೆದವಳು. ಮಗ ರಾಮ ವನವಾಸಕ್ಕೆ ನಡೆದಾಗ ದುಃಖಪಡುವದಷ್ಟೇ ಇವಳಿಗೆ ಬಾಳಿನಲ್ಲಿ ಸಿಕ್ಕಿದ್ದು. ಒಟ್ಟಿನಲ್ಲಿ ಪುರುಷರ ದಬ್ಬಾಳಿಕೆಗೆ, ಶೋಷಣೆಗೆ ಗುರಿಯಾದ ಹಿಂದಿನ ಕಾಲದ ಮಹಿಳೆಯರ ಉದಾಹರಣೆ. "ಕೈಕೇಯಿ". ತನ್ನ ಸೌಂದರ್ಯ, ವಿದ್ವತ್ತು ಮತ್ತು ಶೌರ್ಯಗಳ ಬಗ್ಗೆ ಅತ್ಯಂತ ಹೆಮ್ಮೆಯುಳ್ಳವಳು. ಅವಳ ಈ ಗುಣಕ್ಕೆ ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ರುಕ್ಷವಾಗಿ ಬೆಳೆದದ್ದು ಅಥವಾ ಮುದುಕ ಪತಿ ದೊರೆತದ್ದೋ ಅಥವಾ ದಾಸಿ ಮಂಥರೆಯ ಕುತ್ಸಿಕ ಬುದ್ಧಿಯೋ ಕಾರಣವಾಗಿರಬಹುದು ಎನ್ನುವುದನ್ನು ಮನೋಜ್ಞವಾಗಿ ಬರೆದಿದ್ದಾರೆ. 

"ಮೇನಕಾ". ಬ್ರಹ್ಮನಿಂದ ರಚಿಸಲ್ಪಟ್ಟ ಇಂದ್ರನ ಆಸ್ಥಾನದ ಅಪ್ಸರೆ. ಪುರುಷರನ್ನು ಸಮ್ಮೋಹನಗೊಳಿಸುವುದೇ ಇವಳಿಗಿತ್ತ ಇಂದ್ರನ ಆಜ್ಞೆ. ಆದರೆ ಪ್ರೀತಿಯನ್ನು ಬಯಸಿ ಇಂದ್ರನ ಹಲವಾರು ಆಜ್ಞೆಗಳನ್ನು ಪಾಲಿಸಲು ಪಡಬಾರದ ಕಷ್ಟ ಪಟ್ಟು ಕೊನೆಗೆ ಪ್ರೀತಿಸಿದವನನ್ನು ಪಡೆಯುವ ಅವಳ ಕಥೆ ಕರುಣಾಜನಕ. ಸೌಂದರ್ಯ, ಸ್ವರ್ಗಗಳೇ ಸುಖದ ಉತ್ತುಂಗಗಳಲ್ಲ ಅನ್ನುವುದು ಇಲ್ಲಿ ವ್ಯಕ್ತವಾಗುತ್ತದೆ.  "ಊರ್ವಶಿ". ಮೇನಕೆಯಂತೆ ಸಾಗರದ ತಳದಿಂದ ಬಂದು ಇಂದ್ರನ ಸೊತ್ತಾಗಿದ್ದರೂ ಮೇನಕೆಯಷ್ಟು ಕಷ್ಟ ಸಹಿಸಲಿಲ್ಲ. ಭೂಲೋಕದ ಮಹಾರಾಜ ಪುರೂರವನೊಂದಿಗೆ ಮದುವೆಯಾಗಿ ತನ್ನ ಇಚ್ಛೆಯಂತೆ ಜೀವನದ ಹೆಚ್ಚಿನ ಭಾಗ ಕಳೆದವಳು. "ಭಾನುಮತಿ". ಇವಳು ರಾಜಕುವರಿ,  ದುರ್ಯೋಧನನ ಮೆಚ್ಚಿನ ರಾಣಿ, ಸದ್ಗುಣಗಳ ಖಣಿಯಾಗಿದ್ದರೂ ಮಹಾಭಾರತದಲ್ಲಿ ಈಕೆಯ ಹೆಸರು ಕೇಳಿಬರುವುದಿಲ್ಲ. "ಮಾಧವಿ". ಇವಳದು ಕಲ್ಲು ಹೃದಯಗಳನ್ನೂ ಕರಗಿಸುವಂತಹ ಕರುಣಾಜನಕ ಕಥೆ. ನಾಲ್ಕು ಮಕ್ಕಳನ್ನು ಹೆತ್ತೂ ಕನ್ಯತ್ವವನ್ನು ಉಳಿಸಿಕೊಳ್ಳುವ ವರವನ್ನು ಪಡೆದಂಥ ಹೆಣ್ಣು. ಇದರಿಂದಾಗಿಯೇ ಯಾವ ಹೆಣ್ಣೂ ಅನುಭವಿಸಬಯಸದಂಥ ಕಷ್ಟಗಳಿಗೆ ಹೆಗಲಾದವಳು ಎಂದು ವಿಶ್ಲೇಷಿಸುತ್ತಾರೆ.  ಹೀಗೆ ಹೆಣ್ಣು ಎಂದರೆ ಬೇಕಾದಾಗ ಬೇಕಾದಂತೆ ಉಪಯೋಗಿಸಿಕೊಳ್ಳುವ ಬೊಂಬೆಯೇ? ಹೆಣ್ಣಿನ ಮನೋಭಿಲಾಷೆಗೆ ಯಾವುದೇ ಬೆಲೆಯೇ ಇಲ್ಲವೇ? ಎಂಬ ತರ್ಕಗಳನ್ನು ಇಲ್ಲಿಯ ಬರಹಗಳು ಒಳಗೊಂಡಿವೆ. 

 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books