ಈ ಕೃತಿ ಸುಮಾರು ಐದಾರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಜಯಪ್ರಕಾಶ ನಾರಾಯಣ ಅವರ ‘ಜೀವ ಜೀವದ ನಂಟು: ಸಾದಾ ಸೀದಾ ಮನುಷ್ಯರು’ ಕೃತಿಯ ಎರಡನೇ ಕಟ್ಟು. ಈ ಹೊಸ ಕಟ್ಟು ಅಂತರಂಗದ ಅನನ್ಯರಿಗೆ ಮೀಸಲು.ಅನುವಾದಕರಾಗಿ ಖ್ಯಾತಿ ಪಡೆದಿರುವ ಲೇಖಕರು ಹುಟ್ಟಿ ಬೆಳೆದಿದ್ದು, ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದ ಅಗ್ರಹಾರ ಬೆಳಗುಲಿಯಲ್ಲಿ. ಈ ಊರಿಗೆ ಸುಮಾರು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ ಎನ್ನುವ ಲೇಖಕರು, ಅಲ್ಲಿನ ಇತಿಹಾಸ, ವಾಸಿಸುವ ಕುಟುಂಬಗಳು ಮತ್ತು ಅಲ್ಲಿನ ಸಮಾಜದಲ್ಲಿ ಉಂಟಾದ ಪಲ್ಲಟಗಳನ್ನು ವ್ಯಕ್ತಿಚಿತ್ರಣಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಇದು ಲೇಖನಗಳ ಗುಚ್ಛ ಎನ್ನುವುದರ ಜೊತೆಗೆ ನೆನಪಿನ ಸುರುಳಿಗಳನ್ನು ಬಿಡಿಸುತ್ತಾ ಲೇಖನಿ ಮೂಲಕ ಹದವಾಗಿ ಹರಡಿ ಓದುಗರ ಮುಂದಿಟ್ಟಿರುವ ಪ್ರಬಂಧ ಎನ್ನಬಹುದು.ಲೇಖಕರು ಅನುಭವಿಸಿದ ಪ್ರಸಂಗಗಳು, ಕಣ್ಣಿಗೆ ಕಂಡ ಪರಿಚಿತ ವ್ಯಕ್ತಿಗಳ ನಿತ್ಯದ ನಡವಳಿಕೆ, ಹವ್ಯಾಸ, ಬದುಕು–ಬವಣೆಗಳನ್ನು ಅನನ್ಯ ವ್ಯಕ್ತಿಚಿತ್ರಣಗಳ ಮೂಲಕ ಚಿತ್ರಿಸಿದ್ದಾರೆ. ‘ನಶ್ಶೆ ತ್ವಾಪ’ ಅಲಿಯಾಸ್ ತೋಪಯ್ಯನ ವರ್ಣನೆ, ಗಿರಿಯಪ್ಪ ಮೇಷ್ಟ್ರ ಮೂಲಕ ಜಾತಿ ವ್ಯವಸ್ಥೆಯ ಆಯಾಮದ ವಿಶ್ಲೇಷಣೆ ಹಾಗೂ ಸಮಾಜದಲ್ಲಿನ ಸಂಕೀರ್ಣತೆಯ ಸೂಕ್ಷ್ಮವನ್ನು 20 ವ್ಯಕ್ತಿಚಿತ್ರಣಗಳಲ್ಲಿ ಲೇಖಕರು ಮುಂದಿಟ್ಟಿದ್ದಾರೆ. ಹೀಗಾಗಿಯೇ ಓದುಗರಿಗೆ ತಮ್ಮ ಬಾಲ್ಯ, ಊರಿನ ಚಿತ್ರಣ, ಅಲ್ಲಿನ ಕೆಲ ವಿಶೇಷ ವ್ಯಕ್ತಿಗಳ ನೆನಪೂ ಸ್ಮೃತಿಪಟಲದಲ್ಲಿ ಹಾದುಹೋಗಬಹುದು. ವ್ಯಕ್ತಿಚಿತ್ರಣಗಳಲ್ಲಿ ಬಳಸಿರುವ ಭಾಷೆಯಲ್ಲಿನ ಮಿಶ್ರಣ ಓದಿಗೆ ಮುದ. ಚನ್ನರಾಯಪಟ್ಟಣ ಸೀಮೆಯ ಕನ್ನಡದ ಸೊಬಗು ಇಲ್ಲಿನ ಹಲವು ಪಾತ್ರಗಳಲ್ಲಿ ಇದೆ. ಹಲವು ವಿಶಿಷ್ಟ ಪದಗಳೂ ಇಲ್ಲಿ ಜೋಡಣೆಯಾಗಿವೆ.
https://www.prajavani.net/artculture/book-review/kannada-literature-jeeva-jeevada-nantu-book-review-1018603.html -ಪ್ರಜಾವಾಣಿ
https://sampada.net/%E0%B2%9C%E0%B3%80%E0%B2%B5-%E0%B2%9C%E0%B3%80%E0%B2%B5%E0%B2%A6-%E0%B2%A8%E0%B2%82%E0%B2%9F%E0%B3%81 - ಸಂಪಾದ
©2024 Book Brahma Private Limited.