ʼಆಪ್ತನೋಟʼ ಲೇಖಕ-ವಿಮರ್ಶಕ ಎಸ್. ಆರ್ ವಿಜಯಶಂಕರ ಅವರ ವ್ಯಕ್ತಿಚಿತ್ರಗಳ ಸಂಕಲನ. ಒಟ್ಟು 28 ವ್ಯಕ್ತಿಚಿತ್ರಗಳಿವೆ. ಹಿರಿಯ ಪತ್ರಕರ್ತ -ವಿಮರ್ಶಕ-ಅನುವಾದಕ ಜಿ.ಎನ್. ರಂಗನಾಥ್ ರಾವ್ ಅವರು ಕೃತಿಗೆ ಮುನ್ನುಡಿ ಬರೆದು ‘ಕಾವ್ಯ, ಕಥೆ, ಕಾದಂಬರಿ, ಯಕ್ಷಗಾನ ಕಲೆ, ಅರ್ಥಶಾಸ್ತ್ರ, ರಾಜಕೀಯ, ಆಧ್ಯಾತ್ಮ ಹೀಗೆ ಹಲವು ಬಗೆಯ ಆಸಕ್ತಿಯಿಂದಾಗಿ ಇಲ್ಲಿನ ಬರಹಗಳಲ್ಲಿ ವೈವಿಧ್ಯತೆ ಇದೆ. ಅಧ್ಯಯನ ಶೀಲತೆ, ಸಂವೇದನಾಶೀಲತೆ, ಧ್ಯಾನಸ್ಥ ಮನಸ್ಸು ಅವರ ಬರವಣಿಗೆಯ ಮುಖ್ಯ ಶಕ್ತಿಯಾಗಿದೆ ಎಂಬುದನ್ನು ನಾವು ಈ ಕೃತಿಯ ಮೂಲಕ ಅರಿತುಕೊಳ್ಳಬಹುದು. ಇವರು ಬರೆದಿರುವ ಹಲವಾರು ವ್ಯಕ್ತಿಚಿತ್ರಗಳು, ಸಾಹಿತಿ ಕಲಾವಿದರದಾಗಿದ್ದು, ಅವರು ವ್ಯಕ್ತಿಗಳನ್ನು ವಿಮರ್ಶೆಯ ಬೆಳಕಿನಲ್ಲಿ ನೋಡುವ ಕ್ರಮದಿಂದಾಗಿ , ಇಲ್ಲಿ ಎದುರಾಗುವ ವ್ಯಕ್ತಿಗಳು, ಅವರ ಕೃತಿಗಳು, ಅವುಗಳ ವಿಮರ್ಶೆ, ವ್ಯಾಖ್ಯಾನ ಇವೆಲ್ಲ ನಮಗೆ ತಿಳಿದದ್ದೇ ಎನ್ನುವಷ್ಟರಲ್ಲಿ ಒಂದು ಬೀಜರೂಪಿ ವಾಕ್ಯದಲ್ಲಿ ಅಥವಾ ಮಾಣಿಕ್ಯರೂಪಿ ಮಾತಿನಲ್ಲಿ ವ್ಯಕ್ತಿತ್ವದ ಗುಣಸತ್ವವನ್ನು ಢಾಣಾಡಂಗುರಗೊಳಿಸುವಂತೆ ಎತ್ತಿಹಿಡಿದು ಬೆರಗುಗೊಳಿಸಿದ್ದಾರೆ. ವ್ಯಕ್ತಿಯ ಮೂರ್ತಿವತ್ತಾದ ಬಹಿರಂಗ ಲಕ್ಷಣಗಳಿಗಿಂತ ಮಿಗಿಲಾದುದು ಅವರ ಅಂತಶಃಕ್ತಿ ಮತ್ತು ಅಂತಸತ್ಯಗಳು, ಅಂತರಂಗದ ಅಭೀಪ್ಸೆಗಳು, ಇವನ್ನು ಶೋಧಿಸಿ ಅನಾವರಣಗೊಳಿಸುವ ತಮ್ಮ ಗುರಿಗಮ್ಯತೆಗಳ ಸಾಧನೆ ಎಂಬುದನ್ನು ಈ ಕೃತಿಯ ಮೂಲಕ ರಸವತ್ತಾಗಿ ವಿಶ್ಲೇಷಿಸಿದ್ದಾರೆ. ವಸ್ತುನಿಷ್ಠತೆಯಿಂದ ಮೌಲ್ಯಮಾಪನದಂತೆ ಬರೆಯುವ ಇವರ ಬರವಣಿಗೆಯ ಸಾಲುಗಳು, ಓದುಗಗರನ್ನು ಸೆಳೆಯುವಂತಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.