About the Author

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ. ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು.

ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೊಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರಿ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್‌, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು. ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆಯಿಂದ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಈ ಕಾದಂಬರಿಯನ್ನು ಕಸ್ತೂರಿ ಮಾಸ ಪತ್ರಿಕೆಯ ಪುಸ್ತಕ ವಿಭಾಗಕ್ಕಾಗಿ ಸಂಕ್ಷಿಪ್ತವಾಗಿ ಸಂಗ್ರಹಿಸಿದರು. ಈ ಅನುವಾದವನ್ನೂ ಓದಿದ ಐಬಿಎಚ್‌. ಪ್ರಕಾಶನ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುವಾದಿಸಿಕೊಡುವಂತೆ ಕೋರಿದಾಗ, ಅನುವಾದದ ಪೂರ್ಣ ಕೃತಿಯು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಕಾದಂಬರಿ ವಲಯದಲ್ಲಿ ಉತ್ತಮ ಪ್ರಾರಂಭ ದೊರೆತು ಅನೇಕ ಕಾದಂಬರಿಗಳನ್ನು ಅನುವಾದಿಸಿದರು.

ಮುಂಬಯಿಯ ಜೋಪಡಪಟ್ಟಿಯ ಜೀವನ ಕ್ರಮವನ್ನೂ ನಿರೂಪಿಸುವ ‘ಚಕ್ರ’ (ಮೂಲ ಮರಾಠಿ ಲೇಖಕರು-ಜಯವಂತ ದಳದಿ); ಗೋವೆಯ ದೇವದಾಸಿ ಸಮಸ್ಯೆಯ ಮೇಲೆ ಬೆಳಕುಚೆಲ್ಲುವ ‘ಮಾನು’ (ಜಯವಂತದಳವಿ); ಅನ್ನಕ್ಷುಧೆ-ಕಾಮಕ್ಷುಧೆಯ ತಾಕೂಟದ ವರ್ಣನೆಯ ‘ಶ್ವಪಥ’ (ರಂಗನಾಥ್‌ ಪಠಾರೆ); ದಲಿತರ ಸಾಂಸ್ಕೃತಿಕ ಹೋರಾಟದ ನೆಲೆಗಟ್ಟಿನ ಮೇಲೆ ರೂಪಗೊಂಡಿರುವ ‘ಉಚಲ್ಯಾ’ (ಲಕ್ಷ್ಮಣಗಾಯಕವಾಡ); ಹೆಣ್ಣಿನ ಒಳತುಡಿತಗಳನ್ನು ಎಳೆಎಳೆಯಾಗಿಬಿಡಿಸುವ ‘ಒಂದೊಂದೇ ಎಲೆಯುದುರಿದಾಗ’ (ಗೌರಿದೇಶಪಾಂಡೆ); ಲೇಖಕನ ಬದುಕು ಬರೆಹದಲ್ಲಿ ಇಬ್ಬಂದಿ ಬದುಕಿನ ‘ಕುಣಿಯೆಘುಮಾ’ (ಮಾಧವಿ ದೇಸಾಯಿ); ಮರಾಠ-ಮೊಗಲರ ನಡುವಣ ಚಾರಿತ್ರಿಕ ಸಂಘರ್ಷವನ್ನು ಗುರುತಿಸುವ ‘ಪಾಣಿಪತ’ (ವಿಶ್ವಾಸ ಪಾಟೀಲ)-ಹೀಗೆ ಒಂದೊಂದು ಅನುವಾದಿತ ಕೃತಿಗಳೂ ವಿಶಿಷ್ಟವಾಗಿದ್ದು, ಕನ್ನಡಿಗರಿಗೆ ಹೊಸ ಅನುಭವ ಸಂವೇದನೆಗಳನ್ನೂ ನೀಡುವಂತಹ ಕೃತಿಗಳಾಗಿವೆ. 2004 ರ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಪಡೆದಿರುವ ‘ಮಹಾನಾಯಕ’ ಕಾದಂಬರಿಯು (ವಿಶ್ವಾಸ ಪಾಟೀಲ) ಮರಾಠಿ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತ ಕೃತಿಯಾಗಿದ್ದು, ಜನಮನ್ನಣೆ ಗಳಿಸಿದೆ. ಸುಭಾಶ್‌ ಚಂದ್ರ ಬೋಸರ ಬದುಕಿನ ಸಂಘರ್ಷದ ಕಥೆಯ ನಿರೂಪಣೆಯೇ ಈ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದು, ಇಂಗ್ಲಿಷ್‌ ಹಾಗೂ ಜಪಾನಿ ಭಾಷೆಯೂ ಸೇರಿ ಭಾರತದ ಹಲವಾರು ಭಾಷೆಗಳಿಗೆ ಅನುವಾಗೊಂಡಿರುವ ವಿಶಿಷ್ಟ ಕೃತಿ. ಕನ್ನಡದಲ್ಲಿ ಎರಡನೆಯ ಮುದ್ರಣ ಕಂಡಿರುವುದಷ್ಟೇ ಅಲ್ಲದೆ ಮರಾಠಿಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿದ್ದು 80,000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಮಾರಾಠಿ ಸಾಹಿತ್ಯದಿಂದ ಹೀಗೆ ಸುಮಾರು 30 ಕಾದಂಬರಿಗಳು, 8ಆತ್ಮಕಥೆಗಳು,7 ಕಥಾ ಸಂಕಲನಗಳು, 8 ಸಂಶೋಧನ ಕೃತಿಗಳು, ವೈಚಾರಿಕ, ವೈಜ್ಞಾನಿಕ, ಜೀವನ ಚರಿತ್ರೆಗಳು, ನಾಟಕಗಳು, ಕವಿತೆಗಳು, ಪ್ರಬಂಧಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೆಲವೊಂದು ಕಾದಂಬರಿಗಳಲ್ಲಿ ಬರುವ ಪ್ರಾದೇಶಿಕ ಭಾಷೆಯ ವರ್ಣನೆಯನ್ನು ಕನ್ನಡದಲ್ಲಿ ಹಿಡಿದಿಡುವುದು ಬಹುಪ್ರಯಾಸದ ಕೆಲಸವೆಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೂ ಸವಾಲೆನಿಸುವ ಕೃತಿಗಳನ್ನೂ ಅನುವಾದಿಸಿದ್ದಾರೆ. ಜೊತೆಗೆ ಇವರ ಸ್ವತಂತ್ರ ಕೃತಿಗಳಾದ ‘ಮರಾಠಿ ದಲಿತ ರಂಗಭೂಮಿ’, ಮರಾಠಿ ಭಾಷಾ ಸಾಹಿತ್ಯ, ಗಡಿಸಮಸ್ಯೆ ಮುಂತಾದ ವಿಷಯಗಳ ವೈಚಾರಿಕ ಲೇಖನಗಳ ಸಂಕಲನಗಳಾದ ‘ಅನುಸಂಧಾನ’ ಹಾಗೂ ‘ಜಾಗರ’ ಮತ್ತು ವ್ಯಕ್ತಿ ಪರಿಚಯದ ‘ಬಾಬಾ ಅಮ್ಟೆ’ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲದೆ ಕನ್ನಡದಿಂದ ಮರಾಠಿ ಭಾಷೆಗೆ ಆಧುನಿಕ ಬರಹಗಳನ್ನು ಭಾಷಾಂತರಿಸಿ ಶಾಂತಿನಾಥ ದೇಸಾಯಿಯವರೊಡನೆ ಹೊರತಂದ ಕೃತಿ ‘ಸಂಬಂಧ’ ಎಂಬ ಮರಾಠಿ ಸಂಕಲನ.

ಬಹುಭಾಷೆಯಲ್ಲಿ ಎಷ್ಟೇ ಪಾಂಡಿತ್ಯ ಪಡೆದಿದ್ದರೂ ಅನುವಾದವೆನ್ನುವುದು ಬಹುಕ್ಲಿಷ್ಟಕರವಾದ ಕೆಲಸ. ಒಂದು ಭಾಷೆಯ ಆಡುನುಡಿ, ಗ್ರಾಮ್ಯಭಾಷೆ, ಜನಾಂಗೀಯ ಭಿನ್ನಭಿನ್ನ ಸಂಸ್ಕೃತಿಯ ಮತ್ತೊಂದು ಭಾಷೆಯಲ್ಲಿ ದೊರೆಯುವುದು ವಿರಳವೇ. ಇದಕ್ಕೆ ಮೂಲವಾಗಿ ಬೇಕಾಗಿರುವುದು ಸಾಂಸ್ಕೃತಿಕ, ಜನಾಂಗೀಯ ಅಧ್ಯಯನ ಹಾಗೂ ಭಾಷಾ ಸಂಪತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆಗಳೊಡನೆ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಪೋಕಳೆಯವರಿಗೆ 1999 ಮತ್ತು 2004 ರಲ್ಲಿ ಶ್ರೀದೇವಿ ಶಾನಭಾಗ ಪ್ರಶಸ್ತಿ, 2001ರಲ್ಲಿ ವರದರಾಜ ಆದ್ಯಪ್ರಶಸ್ತಿ, 2002 ರಲ್ಲಿ ಸಂಗಾತಿ ಅಕಾಡಮಿ ಪ್ರಶಸ್ತಿ , 2002 ಮತ್ತು 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2004 ರಲ್ಲಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, 2008ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳು ದೊರೆತಿವೆ.

ಚಂದ್ರಕಾಂತ ಪೋಕಳೆ

(20 Aug 1949)

Books by Author

Awards