ಮಾಂಟೋನ ಕಥೆಗಳ ಅನುವಾದಿತ ಸಂಕಲನ ''ಯಕ್...!!'' . ಲೇಖಕಿ ಭಾರತಿ ಬಿ.ವಿ ಅವರು ಕೃತಿಯ ಕುರಿತು ಹೇಳಿರುವಂತೆ, ಈ ಮಾಂಟೋನ ಕಥೆಗಳೊಡನೆ ಒಮ್ಮೆ ಮೋಹಕ್ಕೆ ಬಿದ್ದರೆ ಕಥೆ ಮುಗಿಯಿತು... ಎಂದಿಗೂ ಅದು ಮುಗಿಯುವುದೇ ಇಲ್ಲ. ಬಣ್ಣಬಣ್ಣದ ಆಟಿಕೆಗಳೊಡನೆ ಮಕ್ಕಳು ಆಟವಾಡುವಂತೆ... ಇದು ಬೇಕು.... ಅಯ್ಯೋ ಅಲ್ಲಿರುವುದು ಇದಕ್ಕಿಂತ ಚೆಂದ...ಇದು? ಇದು ಅದಕ್ಕಿಂತ ಚೆಂದವಿರುವ ಹಾಗಿದೆ! ಉಹು ಇದು ಇರಲಿ..ಉಹು ಅದೂ ಇರಲಿ..ಉಹು ಎಲ್ಲವೂ ಬೇಕು ಉಹು ಅಂಗಡಿಯಲ್ಲಿ ತೂಗು ಹಾಕಿರುವುದೂ ಬೇಕು ಉಹು ಗೆಳೆಯನ ಬಳಿ ಇರುವುದೂ ಬೇಕು ಬೇಕು... ಬೇಕು... ಬೇಕು... ಈ ಥರದ ಆಸೆಬುರುಕತನ! ಇಷ್ಟೆಲ್ಲ ಆಯಿತಲ್ಲ? ಈಗಲೂ... ಈ ಕ್ಷಣಕ್ಕೂ... ಮತ್ತಿಷ್ಟು ಪುಸ್ತಕ ಇಂಗ್ಲಿಷ್‌ನಲ್ಲಿ ಇದೆಯೋ ವಿಚಾರಿಸಬೇಕಿತ್ತು, ಅವುಗಳನ್ನೆಲ್ಲ ಓದಿದ್ದರೆ ಇವುಗಳನ್ನು ಮೀರಿಸಿದಂಥ ಮತ್ತೆ ಯಾವುದೋ ಕಥೆ ಸಿಗುತ್ತಿತ್ತೇನೋ, ಅಯ್ಯೋ ನನಗೆ ಉರ್ದು ಭಾಷೆ ಬಂದಿದ್ದರೆ ಮಾಂಟೋನ ಕಥೆಗಳ ಗಣಿಯಲ್ಲಿ ಮತ್ತೆ ಯಾವುದೆಲ್ಲ ರತ್ನಗಳು ಸಿಗುತ್ತಿದ್ದವೋ... ಹೀಗೆ ಮುಗಿಯದ ಹಳಹಳಿಕೆ. ಬಹುಶಃ ಮಾಂಟೋ ಈ ಹಳಹಳಿ ಉಳಿಸುತ್ತಾರೆಂದೇ ನಮಗೆ ದಶಕಗಳ ನಂತರವೂ ಇಷ್ಟು ಕಾಡುತ್ತಾರೋ ಏನೋ ಗೊತ್ತಿಲ್ಲ... ಆದರೂ ಪ್ರತಿಯೊಂದು ಹುಡುಕಾಟಕ್ಕೂ ಒಂದು ಅಂತ್ಯ... ಅಥವಾ ಈ ಕ್ಷಣಕ್ಕೆ ಅಂತ್ಯ ಎಂದು ತಪ್ಪಾಗಿ ಭ್ರಮಿಸಿದ ತಾತ್ಕಾಲಿಕ ಅಂತ್ಯವಾದರೂ ಇರಲೇಬೇಕಲ್ಲವೇ? ಹಾಗೆ ಮಾಂಟೋನ ಕಥೆಗಳಲ್ಲಿ ಈ ಕ್ಷಣಕ್ಕೆ ನನಗೆ Ultimate ಅನಿಸುತ್ತಿರುವ ಕೆಲವು ಕಥೆಗಳನ್ನು ಅನುವಾದಿಸಿದ್ದೇನೆ. ಇದನ್ನು ಅನುವಾದ ಅನ್ನುವುದಕ್ಕಿಂತ ನನ್ನ ಬದುಕಿನ ಅತ್ಯಂತ ಖುಷಿಯ ಅದ್ಭುತ ಪಯಣ ಅನ್ನಬಹುದು... ಎಂದೂ ಮುಗಿಯದಿರಲಿ ಎಂದು ಬಯಸುವಂಥ ಪ್ರೀತಿಯ ಪಯಣ! ಈ ‘ತಾತ್ಕಾಲಿಕತೆ’ ಹಾಗೂ ‘ಮುಗಿಯದಿರಲಿ’ ಅನ್ನಿಸುವ ಭಾವವೂ ಮುಂದೊಂದು ದಿನದ ಮತ್ತೆ ಯಾವುದೋ ಸಂಭವನೀಯ ಘಟನೆಯ ಡಿಸೈನಿಗೆ ಇಂದಿನಿಂದಲೇ ಪ್ರಾರಂಭವಾಗಿರುವ ಕುಂಚದ ಮೊದಲ ಎಳೆಯೋ ಏನೋ ಯಾರಿಗೆ ಗೊತ್ತು! ಇರಬಹುದಲ್ಲವಾ? ಎಂಬುದಾಗಿ ಬರೆದುಕೊಂಡಿದ್ದಾರೆ.
©2024 Book Brahma Private Limited.