ಲೇಖಕ ಎಸ್. ದಿವಾಕರ್ ಅವರು ಸಂಗ್ರಹಿಸಿದ ಈ ಪುಸ್ತಕವು ಹಲವು ದೇಶಗಳ ಅತಿಸಣ್ಣ ಕತೆಗಳನ್ನು ಒಳಗೊಂಡಿರುವಂತದ್ದು. ಸುಮಾರು 66 ಕತೆಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಫ್ರಾನ್ಸ್, ರಷ್ಯಾ, ಪೋರ್ಚುಗೀಸ್, ಸ್ಪ್ಯಾನಿಶ್, ಅಮೆರಿಕ, ಸ್ವಿಡನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಇಸ್ರೆಲ್, ಗ್ರೀಸ್, ಹಂಗೇರಿ ಇನ್ನೂ ಹಲವಾರು ದೇಶಗಳ ಲೇಖಕರ ಕತೆಗಳನ್ನು ಕನ್ನಡಕ್ಕೆ ತಂದಿರುವುದು ಲೇಖಕರ ಎಲ್ಲ ಭಾಷೆಯ, ಎಲ್ಲ ಕಾಲದ, ಎಲ್ಲ ರೀತಿಯ ಬರಹಗಳ ಆಸಕ್ತಿಯನ್ನು ತಿಳಿಸುವಂತದ್ದು. ಸಾಹಿತ್ಯ ಲೋಕದ ಎಲ್ಲಾ ಆಯಾಮಗಳನ್ನೂ ದಿವಾಕರ್ ಮನಗಂಡವರು, ಅಂತೆಯೇ ಅವರ ಈ ಪುಸ್ತಕವು ಹಲವು ದೇಶಗಳ ಅತಿಸಣ್ಣ ಕತೆಗಳ ವಿವಿಧ ಸ್ತರಗಳನ್ನೂ ನಮಗೆ ಪರಿಚಯಿಸುವ ಬೃಹತ್ ಕಥಾ ವೃಕ್ಷವಾಗಿದೆ. ಜಗತ್ತಿನ ಸಣ್ಣಕತೆಗಳ ಹೊಸ ಸಾಧ್ಯತೆಗಳನ್ನು ತೆರೆದು, ದೇಸೀ ನೆಲೆಯಲ್ಲಿ ಕನ್ನಡಕ್ಕೆ ತಂದಿರುವ ಈ ಪುಸ್ತಕವು ಕನ್ನಡ ಕಥನ ಲೋಕಕ್ಕೆ ಅಪೂರ್ವ ಕೃತಿಯೆಂದೇ ಹೇಳಬಹುದು.
ಕನ್ನಡಕ ಸಾಹಿತ್ಯ ಜಗತ್ತಿಗೆ ಹೊರಗಿನ ಗಾಳಿ, ಬೆಳಕು ತಂದು ಸುರಿಯುವ ಮೂಲಕ ಒಳಗಿನ ಜಗತ್ತಿನ ಆರೋಗ್ಯ ಕಾಪಿಡುವ ಕೆಲಸವನ್ನೂ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕೃತಿಯಲ್ಲಿರುವ ಹಲವು ಸಣ್ಣ ಕಥೆಗಳು ಪುಟದಲ್ಲಿ ಬಹುಬೇಗ ಮುಗಿದು ಹೋದರೂ ಮನಸಲ್ಲಿ ಬೆಳೆಯುತ್ತಲೇ ಹೋಗುತ್ತವೆ. ರಾಜಕೀಯ, ಸಾಮಾಜಿಕ, ಮಹಿಳಾ ಸಬಲೀಕರಣ, ಯುದ್ಧ, ಕ್ರೌರ್ಯ, ಅಸಹಾಯಕತೆ, ವ್ಯವಸ್ಥೆಯ ಮುಖವಾಡಗಳ ಬಿಂಬಗಳನ್ನು ಬಹುಸೂಚ್ಯವಾಗಿ, ಸ್ಪಷ್ಟವಾಗಿ ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.