ಇಂಡೀನೇಷಿಯಾದ ಲೇಖಕಿ ಅಸ್ಮಾ ನಾಡಿಯಾ ಅವರು ಇಂಡೀನೇಷಿಯಾದ ದಿಟ್ಟ ಮಹಿಳೆಯರ ಕಥೆಗಳನ್ನು ಇಂಗ್ಲಿಷ್ ನಲ್ಲಿ ಬರೆದಿದ್ದು, ಅವುಗಳನ್ನು ಲೇಖಕಿ ಗೀತಾ ಎಚ್.ಎನ್. ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಅಮ್ಮನಿಗೆ ಹಜ್ ಬಯಕೆ. ಸಾಮಾಜಿಕ ಕಳಕಳಿಯ ವಸ್ತು ಈ ಬರಹಗಳ ಮೂಲ ಜೀವಾಳ. ಕೊಳಚೆ ಪ್ರದೇಶದ ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು, ಓದುವ ಹವ್ಯಾಸವನ್ನು ಬೆಳೆಸಲು ಶ್ರಮಿಸುತ್ತಿದ್ದ ಲೇಖಕಿ, ಇಂಡೋನೇಷಿಯಾದ ನೂರೊಂದು ದ್ವೀಪಗಳಲ್ಲಿ ಸದಾ ತಿರುಗಾಡುತ್ತಾ, ಹೆಣ್ಣುಮಕ್ಕಳಿಗೆ ತಮ್ಮ ಮನದ ಭಾವನೆಗಳನ್ನು ಅಭಿವ್ಯಕ್ತಿಸಲು ರೈಟರ್ಸ್ ವರ್ಕ್‌ಶಾಪ್ ನಡೆಸಿಕೊಡುತ್ತಾರೆ. ನನ್ನ ತಾಯಿ ಗಟ್ಟಿ ಹೆಂಗಸು, ಧೈರ್ಯ ದಿಟ್ಟತನದ ಆಕೆ ಅತ್ಯಂತ ಸಂದರ ಹೃದಯದ ಮಹಿಳೆ ಎನ್ನುವ ಅಸ್ಮಾ ಅವರ ಕತೆಗಳಲ್ಲಿ ದಿಟ್ಟ ಹೆಣ್ಣುಗಳ ಚಿತ್ರಣ ಸಹಜವಾಗಿಯೇ ಮೂಡಿ ಬಂದಿದೆ. ಇಂಡೋನೇಷಿಯಾದ ಈ ಬರಹಗಾರ್ತಿಯ ಸರಳ ಕತೆಗಳು, ಮಹಿಳಾ ಅನುಭವಗಳ ಸಾರ್ವತ್ರಿಕತೆಯನ್ನು ಮಾನವೀಯ ಮೌಲ್ಯಗಳ ತುಡಿತಗಳನ್ನು ಬಿಂಬಿಸುತ್ತವೆ. ಇಂಡೋನೇಶಿಯಾವನ್ನು ಇಂಡಿಯಾಕ್ಕೆ ಹತ್ತಿರವಾಗಿಸುವ ಇವರ ಕತೆಗಳ ಸಂಗ್ರಹ -ಅಮ್ಮನಿಗೆ ಹಜ್ ಬಯಕೆ.
©2024 Book Brahma Private Limited.