ಹಿರಿಯ ಸಾಹಿತಿ ಎಲ್. ಗುಂಡಪ್ಪ ಅವರು ಸಾಹಿತ್ಯ ಮಹರ್ಷಿ ಟಾಲ್ ಸ್ಟಾಯ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಆ ಕಥೆಗಳನ್ನು ಸಂಕಲಿಸಿದ ಕೃತಿ ಇದು. ಟಾಲ್ ಸ್ಟಾಯ್ ಕಥೆಗಳನ್ನು ಬಹುತೇಕರು ಕನ್ನಡಕ್ಕೆ ಅನುವಾದಿಸಿದ್ದು, ಎಲ್. ಗುಂಡಪ್ಪನವರ ಅನುಭವ, ಕಾಣ್ಕೆ, ಬರಹದ ಸೂಕ್ಷ್ಮತೆ, ಸಮರ್ಪಕ ಪದಗಳ ಬಳಕೆ, ಸಾಲುಗಳ ಮಧ್ಯೆ ಓದಿ ಬರೆದ ಚಿಂತನೆಗಳು ಈ ಎಲ್ಲ ಅಂಶಗಳಿಂದ ಉಳಿದ ಕೃತಿಗಳಿಗಿಂತ ಎಲ್. ಗುಂಡಪ್ಪನವರ ಈ ಅನುವಾದಿತ ಕೃತಿಯು ಹೆಚ್ಚು ಪರಿಣಾಮಕಾರಿಯಾಗಿದೆ.
ರಷ್ಯಾದ ಲಿಯೋ ಟಾಲಸ್ಟಾಯಿ ಉತ್ತಮ ಕಲಾವಿದರು. ಚಿಂತಕರು. ಮಾನವತಾವಾದಿ. ಕಥೆ-ಕಾದಂಬರಿ ಮೂಲಕ ಮಾನವನ ಸಣ್ಣತನ ಮತ್ತು ಸಾಧಿಸಲು ಇರುವ ಅಗಾಧತನವನ್ನು ತೋರಿದವರು. ಅವರ 20 ಕಥೆಗಳನ್ನು ಲೇಖಕ ಎಲ್. ಗುಂಡಪ್ಪ ಅವರು ಅನುವಾದಿಸಿದ್ದಾರೆ. ಸ್ಥಳ-ಹೆಸರುಗಳನ್ನು ಇಲ್ಲಿ ಹೊಂದಿಕೆಯಾಗುವಂತೆ ಬದಲಿಸಿದೆ ಎಂದು ಲೇಖಕರು ತಿಳಿಸಿದ್ದಾರೆ. ಕಡೆಗಣಿಸಿದ ಕಿಡಿ ಮನಸ್ಸನ್ನು ಸುಡುತ್ತದೆ, ಮರಿಪಿಶಾಚಿಯು ರೊಟ್ಟಿಯನ್ನು ಸಂಪಾದಿಸಿದ ಬಗೆ, ಪಶ್ಚಾತ್ತಾಪಿಯಾದ ಪಾಪಿ, ಬೆಪ್ಪತಕಡಿ ಐವಾನ್-ಈ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಬ್ಬರು ಮುದುಕರು, ಎಲ್ಲಿ ಪ್ರೇಮವೋ ಅಲ್ಲಿ ದೇವರು, ಕೆಲಸ, ಸಾವು ಮತ್ತು ರೋಗ, ಕೆಟ್ಟದ್ದು ಸೆಳೆಯುತ್ತದೆ; ಒಳ್ಳೆಯದು ಉಳಿಯುತ್ತದೆ, ಚಿಕ್ಕ ಹುಡುಗಿಯರು ದೊಡ್ಡವರಿಗಿಂತ ವಿವೇಕಿಗಳು, ಜನರು ಜೀವಿಸುವುದೇತರಿಂದ?, ಮೂರು ಪ್ರಶ್ನೆಗಳು ಹೀಗೆ ಒಟ್ಟು 20 0ಕಥೆಗಳು ಬದುಕಿನ ತೀವ್ರತೆಯನ್ನು, ಅಗಾಧತನವನ್ನು, ಕ್ಷಣಿಕತನವನ್ನು ತೋರುತ್ತವೆ.
1936ರಲ್ಲಿ, ಬೆಂಗಳೂರಿನ ಬಸವನಗುಡಿಯ ಭಾರತಿ ಸಾಹಿತ್ಯ ಮಂದಿರ ಪ್ರಕಾಶನವು ಮೊದಲ ಬಾರಿಗೆ ಈ ಕೃತಿಯನ್ನು (ಪುಟ: 396)) ಪ್ರಕಟಿಸಿತ್ತು.
©2024 Book Brahma Private Limited.