‘ಹಿಮಾಲಯದ ನರಭಕ್ಷಕಗಳು’ ಕೃತಿಯು ಲೇಖಕ ಟಿ. ಎಸ್. ವಿವೇಕಾನಂದ ಅವರು ಜಿಮ್ ಕಾರ್ಬೆಟ್‌ನ ಸಮಗ್ರ ಕತೆಗಳನ್ನು ಅನುವಾದಿತ ಕೃತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಕೆ. ವೈ ನಾರಾಯಣಸ್ವಾಮಿ ಅವರು, ‘ಬೇಟೆಯನ್ನು ಒಂದು ಕಾಯಕ ಪ್ರಜ್ಞೆಯಲ್ಲಿ ಬಾಳಿದ ಕಾರ್ಬೆಟ್‌ನ ಅರಣ್ಯ ಪ್ರೀತಿ ಇರುವೆಂಭತ್ತು ಕೋಟಿ ಜೀವರಾಶಿಗಳನ್ನೂ ಅವುಗಳ ಬದುಕುವ ಹಕ್ಕನ್ನೂ ಮಾನ್ಯ ಮಾಡುವ ಗುಣಗೌರವದಿಂದ ಕೂಡಿದ್ದು ಇಲ್ಲಿ ಕಾಣಬಹುದು. ಪ್ರತಿಯೊಂದು ನರಭಕ್ಷಕ ಹುಲಿಯನ್ನು ಬೇಟೆಯಾಡಿದಾಗಲೂ ಆದ ಅನುಭವ ವಿವರಗಳನ್ನು ಕಟ್ಟಿಕೊಡುವಾಗ ಅವರು ವಿವರಿಸುವ ಕಾಡಿನ ಬಗೆ ವಿನ್ಯಾಸ ಅವರ ನೆನಪಿನ ತೀಕ್ಷ್ಣತೆಗೆ, ಗ್ರಹಿಕೆಯ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ಮೃತ್ಯು ಎದುರಿಗೆ ನಿಂತಾಗಲೂ ಧೃತಿಗೆಡದ ಅವರ ಆತ್ಮ ವಿಶ್ವಾಸದ ನಿಲುಮೆ ಅನನ್ಯವಾದುದು. ಇದೆಲ್ಲವೂ ಅವರ ಬರಹಗಳಲ್ಲಿ ತುಂಬಿಕೊಂಡಿವೆ. ಯಾವ ಜೀವ ವಿಜ್ಞಾನವೂ ತಿಳಿಸಲಾರದ ಎಷ್ಟೋ ಸೂಕ್ಷ್ಮಾತಿ ಸೂಕ್ಷ್ಮ ವಿಷಯಜ್ಞಾನವನ್ನು ಅನುಭವ ಮಾತ್ರದಿಂದ ಪಡೆದವರಾದ ಕಾರ್ಬೆಟ್ ಒಂದು ಅದ್ಭುತ ಬೇಟಿಯನ್ನು ನಿಸರ್ಗಧರ್ಮಕ್ಕೆ ಎರವಾಗುವ ನಡೆಯಲ್ಲಿ ಜೀವ ಸಂರಕ್ಷಕ ವಿಧಿಯಂತೆ ಪರಿಪಾಲಿಸಿದ ಮಹನುಭಾವ ಎನ್ನಬಹುದು. ಇಂಥ ಬೇಟೆಯ ಸಂತನ ಅನುಭವ ಕಥನವನ್ನು ಓದಿದ್ದೇ ನನ್ನ ಅಕ್ಷರಜ್ಞಾನದ ಅದೃಷ್ಟ ಭಾಗ್ಯವೆಂದು ನನ್ನ ತಿಳಿವು ಹೇಳುತ್ತಿದೆ. ಗೆಳೆಯ ವಿವೇಕಾನಂದನಿಗೆ ಆತ್ಮೀಯ ಕೃತಜ್ಞತೆಗಳು, ಕಾರಣ ಇಷ್ಟು ವಿಸ್ತಾರವಾದ ಈ ಬರಹವನ್ನು ಧ್ಯಾನಸ್ಥಿತಿಯ ಬದ್ಧತೆಯಲ್ಲಿ ಒಳಕ್ಕೆ ತೆಗೆದುಕೊಂಡು ಅದನ್ನು ಕನ್ನಡೀಕರಿಸಿದ್ದಕ್ಕೆ. ಇದನ್ನು ಕೇವಲ ಅನುವಾದ ಎಂದು ಹೇಳಿದರೆ ಆಹಂಕಾರವಾಗುತ್ತದೆ. ಕನ್ನಡ ಭಾಷೆಯ ಚಾಯಮಾನಕ್ಕೆ ಕಿಂಚಿತ್ತೂ ಊನವಾಗದ ಪ್ರಜ್ಞೆಯಲ್ಲಿ ಕಾರ್ಬೆಟ್ ನ ಅನುಭವವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಈ ಕಾರ್ಯ ಗುರುತರವಾದ ಹೊಣೆಗಾರಿಕೆ ಮಹತ್ವವಾದುದು. ಈ ಜೀವಲೋಕದ ಬಗೆಗೆ ಕಾರ್ಬೆಟ್ ಪ್ರಜ್ಞೆಯನ್ನು ಬೆಳೆಸಿಕೊಂಡ ಮನಸ್ಸು ಮಾತ್ರ ಇಂಥ ಸಾಹಸಕ್ಕೆ ಶ್ರದ್ಧೆ, ಗೌರವಗಳಿಂದ ತೊಡಗುತ್ತದೆ ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.