ಬಸವರಾಜ ಡೋಣೂರರ ‘ದೇವರನ್ಯಾಯ’ ಅನುವಾದಿತ ಕತೆಗಳ ಸಂಕಲನ. ಇಲ್ಲಿನ ಕತೆಗಳು ಒಳಿತು ಮತ್ತು ಕೆಡುಕಿನ ಸಂಘರ್ಷವನ್ನು ಅತ್ಯಂತ ಕಲಾತ್ಮಕವಾಗಿ ನಿರೂಪಿಸುತ್ತವೆ.
ಬೇರೆ ಬೇರೆ ಭಾಷೆಗಳ, ಬೇರೆ ಬೇರೆ ಲೇಖಕರ ಹಲವು ಕತೆಗಳನ್ನು ಒಟ್ಟು ಮಾಡಿ ಕೊಡುತ್ತಿದ್ದೇನೆಯೆ ಹೊರತು ಇದರಲ್ಲಿ ಯಾವುದೆ ಪ್ರಾತಿನಿಧಿಕತೆಯನ್ನು ವ್ಯಕ್ತಪಡಿಸಲು ತಾನು ಇಚ್ಛಿಸಿಲ್ಲ ಎಂದು ಅನುವಾದಕರು ಹೇಳಿಕೊಂಡಿದ್ದಾರೆ. ಆದರೆ ಡೋಣೂರರಿಗೆ ಗೊತ್ತಿಲ್ಲದಂತೆಯೇ ಒಂದು ತಾತ್ವಿಕ ಬಂಧ ಹಾಗೂ ಚೌಕಟ್ಟು ಇಲ್ಲಿ ಪ್ರಾಪ್ತವಾಗಿದೆ. ಕೆಡುಕನ್ನು ನಿಗ್ರಹಿಸಬೇಕೆನ್ನುವ ಆಗ್ರಹ ಈ ಅಪರೂಪದ ಕತೆಗಳನ್ನು ಹಿಡಿದಿಟ್ಟಿದೆ. ಈ ಕತೆಗಳನ್ನು ಪೋಣಿಸಲಿಕ್ಕೆ ಉಪಯೋಗಿಸಿದ ದಾರವನ್ನು ಒಳ್ಳೆಯತನ, ಸಜ್ಜನಿಕೆ, ಸತ್ಯಗಳೆಂಬ ಮೌಲ್ಯಗಳಿಂದ ಹೊಸೆಯಲಾಗಿದೆ.
ಈ ಕತೆಗಳಲ್ಲಿಯ ಪಾತ್ರಗಳು ಸಂಕಷ್ಟ ಹಾಗೂ ಸಂಘರ್ಷಗಳೆಂಬ ಉರಿಉರಿಯಲ್ಲಿ ಹಾದು ಬರುತ್ತದೆ. ಕೊನೆಗೆ ಸತ್ಯವೆ ಗೆಲ್ಲುವುದು ಎಂಬ ನಂಬಿಕೆಯನ್ನು ಉಳಿಸಿಕೊಳ್ಳುವುದರಲ್ಲಿ ಈ ಕಥಾನಕಗಳ ಹೆಚ್ಚುಗಾರಿಕೆ ಇದೆ. ಕೊನೆಗೆ ಒಳ್ಳೆಯದಕ್ಕೆ ಜಯವಾಗುವುದು ಎಂದು ಹೇಳುವುದು ಸುಲಭ, ಆದರೆ ಅದನ್ನು ನಿರೂಪಿಸುವುದು ಹಾಗೂ ಕಲಾತ್ಮಕವಾಗಿ ಮಂಡಿಸುವುದು ಮಾತ್ರ ತುಂಬಾ ಕಷ್ಟದ ಕೆಲಸ. ಟಾಲ್ ಸ್ಟಾಯ್ , ಆ್ಯಂಟನ್ ಚೆಕಾಫ್ ಮುಂತಾದ ಜಗತ್ತಿನ ಮೇರು ಅಕ್ಷರ ಕಲಾಕಾರರು ಅದನ್ನು ಎಷ್ಟು ಸಲೀಸಾಗಿ ಹಾಗೂ ಸರಳವಾಗಿ ನಿಭಾಯಿಸುತ್ತಾರೆ ಎಂಬುದನ್ನು ಇಲ್ಲಿನ ಅನೇಕ ಅನುವಾದಗಳು ತೆರೆದಿಟ್ಟಿವೆ. ಮನುಷ್ಯನ ಮೂಲಭೂತ ಒಳ್ಳೆಯತನ ಹಾಗೂ ಕೆಡುಕಗಳ ಸಾದೃಶ್ಯ-ವಿದೃಶ್ಯಗಳನ್ನು ಅತ್ಯಂತ ಆಪ್ತವಾಗಿ ಚಿತ್ರಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು. 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...
READ MORE