ಪ್ರಸ್ತುತ ತಮಿಳಿನಿಂದ ಕನ್ನಡಕ್ಕೆ ಬಂದ ಕೆ. ನಲ್ಲತಂಬಿಯವರ ಎರಡನೇ ಅನುವಾದಿತ ಸಣ್ಣ ಕತೆಗಳ ಗುಚ್ಛ ‘ಸರಸವಾಣಿಯ ಗಿಣಿಗಳು’. ಹತ್ತು ಕತೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ವೈವಿಧ್ಯತೆಯಿದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ಮೈದಾಳಿರುವಂತೆ ಕಾಣುವ ಇಲ್ಲಿನ ಕತೆಗಳಲ್ಲಿ, ಮರು ವ್ಯಾಖ್ಯಾನಕ್ಕೊಳಪಟ್ಟ ಎಂಟನೇ ಶತಮಾನದ ಧಾರ್ಮಿಕ ಸಂಕಟ ಮತ್ತು ಸಂಘರ್ಷಗಳ ಐತಿಹಾಸಿಕ-ಪೌರಾಣಿಕ ಕಥನ, ಬದಲಾವಣೆಯ ಹೊಸ್ತಿಲಲ್ಲಿ ನಿಂತು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಸ್ಥಿತ್ಯಂತರಕ್ಕೊಳಗಾದ ಹಳ್ಳಿಯ ಮುಗ್ಧ ಪರಿಸರ ಹಾಗೂ ಇವತ್ತಿನ ಕಾರ್ಪೋರೇಟ್ ಜಗತ್ತು ಎಂದು ಮೂರು ಹಂತದಲ್ಲಿ ವಿಸ್ತಾರಗೊಂಡ ಕಥಾಲೋಕವೊಂದು ಅನಾವರಣಗೊಂಡಿದೆ. ವಿಶಿಷ್ಟ ದೃಷ್ಟಿಕೋನದ ಹಾಗೂ ವಿಭಿನ್ನ ಆಯಾಮದ ಕಥನಕ್ರಮವನ್ನು ಅನುಸರಿಸಿರುವ ಕೆಲ ಹೊಸ ಮಾದರಿಯ ಕತೆಗಳನ್ನು ಕಾಣಲೂ ಇಲ್ಲಿ ಸಾಧ್ಯವಿದೆ. ವಾಸ್ತವ ತಳಹದಿಯಲ್ಲಿ ಮೂಡಿ ಬಂದ ಕತೆಗಳ ನೈಜ ಸಂಗತಿಗಳಷ್ಟೇ ಸಹಜವಾಗಿ, ವಾಸ್ತವದ ಪಾತಳಿ ಬಿಟ್ಟು ವಾಸ್ತವೇತರ ನೆಲೆಯನ್ನು ಸ್ವರ್ಶಿಸುತ್ತಾ ಭ್ರಾಮಕ ಲೋಕದ ಅವಾಸ್ತವಿಕ ಘಟನೆಗಳನ್ನು ಒಳಗೊಂಡ ಕತೆಗಳು ಕೂಡಾ ತಮ್ಮ ನೆಲೆಯನ್ನು ಸುಭದ್ರವಾಗಿ ಪಡೆದುಕೊಂಡಿವೆ. ನೋಡನೋಡುತ್ತಲೇ ಸರಳ ಕತೆಗಳು ಸಾಂಕೇತಿಕವಾಗಿ ನಿಗೂಢಾರ್ಥವನ್ನು ಧ್ವನಿಸುವಂತಹ ಉದಾಹರಣೆಗಳೂ ಸಿಗುತ್ತವೆ.
ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...
READ MORE