ಭಾರತ ಸ್ವಾತಂತ್ಯ್ರ ಪಡೆದ ನಂತರ ನಡೆದ ಭಾರತ ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಜನರ ವಲಸೆ, ನೋವು, ನಲಿವುಗಳ ಕುರಿತಾದ ಕಥೆಗಳ ಸಂಕಲನ ಇದಾಗಿದೆ. ಸಾದತ್ ಹಸನ್ ಮಂಟೋ ಬರೆದ ಹಿಂದಿ ಮೂಲದ ಕೃತಿಯನ್ನು ಫಕೀರ್ ಮಹಮ್ಮದ್ ಕಟ್ಪಾಡಿ ಅವರು ಕನ್ನಡೀಕರಿಸಿದ್ದಾರೆ. ಈ ಕೃತಿಯು ಮೂರು ಮುದ್ರಣ ಕಂಡಿದೆ.
1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಕಂಡ ಕರಾಳ ಅನುಭವಗಳನ್ನು ಶಬ್ದಗಳ ಮೂಲಕ ನಮ್ಮ ಅನುಭವಕ್ಕೆ ತಂದ ಉರ್ದು ಭಾಷೆಯ ಶ್ರೇಷ್ಠ ಸಾಹಿತಿಗಳಲ್ಲಿ ಓರ್ವರಾದ ಸಾದತ್ ಹಸನ್ ಮಂಟೋ ಭಾರತದಲ್ಲಿ ಹುಟ್ಟಿ ಬೆಳೆದವರು. ನಂತರ ದೇಶ ವಿಭಜನೆಯು ಸೃಷ್ಟಿಸಿದ ಕ್ರೂರ ವಾತಾವರಣಕ್ಕೆ ಬಲಿಯಾಗಿ ಪಾಕಿಸ್ತಾನಕ್ಕೆ ಒಲ್ಲದ ಮನಸ್ಸಿನಿಂದ ವಲಸೆ ಹೋದವರು. ಇನ್ನೂರಕ್ಕೂ ಹೆಚ್ಚು ಸಣ್ಣಕಥೆಗಳನ್ನು, ಇದಕ್ಕಿಂತಲೂ ಹೆಚ್ಚಿನ ಹಿಂದಿ ಚಲನಚಿತ್ರಗಳಿಗೆ ಸಾಹಿತ್ಯ ಬರೆದು, ನಾಟಕಗಳನ್ನು, ಸ್ತಬ್ಧಚಿತ್ರಗಳನ್ನು, ಹಲವಾರು ಶ್ರೇಷ್ಠ ಪ್ರಬಂಧಗಳನ್ನು, ಅನುವಾದಗಳನ್ನು ಬರೆದ ಮಹಾ ಮೇಧಾವಿಯೆಂದು ಪರಿಗಣಿಸಲ್ಪಟ್ಟ ಮಂಟೋ ಬದುಕಿನುದ್ದಕ್ಕೂ ಅನೇಕ ಸಂಕಷ್ಟಗಳನ್ನು ಎದುರಿಸಿದವರು.
ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಿದ್ದು ಮತ್ತು ಅದರಿಂದ ಉದ್ಭವಿಸಿದ ಮನುಷ್ಯ ಮನುಷ್ಯರ ನಡುವೆ ಬೆಳೆದ ವೈಷಮ್ಯದ ಕಂದರ ಮಂಟೋರನ್ನು ಹೆಚ್ಚು ಕಾಡಿತು. ತನ್ನ ನಿಜಜೀವನದ ಅನುಭವಗಳನ್ನು ಕಥೆಗಳಲ್ಲಿ ಮೂಡಿಸಿದ್ದರು. ವಿಭಜನೆಯ ವಿಷವರ್ತುಲ ಅವರಿಗೆ ತಮ್ಮ ಅನೇಕ ನೆಚ್ಚಿನ ಸ್ನೇಹಿತರನ್ನು ಕಳೆದುಕೊಳ್ಳುವಂತೆ ಮಾಡಿತು, ಹಲವು ಗೆಳೆಯರ ಅನುಮಾನಕ್ಕೆ, ಸಂಶಯಕ್ಕೆ ಗುರಿಯಾಗಿದ್ದರು. ಈ ಸಂಕಲನದಲ್ಲಿರುವ ಕಥೆಗಳು ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹೃದಯಹೀನ, ಅಮಾನುಷ ಘಟನೆಗಳ ದಾಖಲೆಗಳು.
©2024 Book Brahma Private Limited.